Header Ads

test

ದೇಹಕ್ಕೆ ಗಾಯವಾದಾಗ ಬೇಳೆ ತಿಂದರೆ ಕೀವು ಉಂಟಾಗುತ್ತದೆ ಅಂತಾರೆ ನಿಜವೇ?

ನಮ್ಮ ಸಮಾಜದಲ್ಲಿ ಮೂಢ ನಂಬಿಕೆಗಳು ಸಾಕಷ್ಟಿವೆ. ಏನು ಹೇಳಿದರೆ ಅದನ್ನೆಲ್ಲಾ ಸುಲಭವಾಗಿ ನಂಬುತ್ತಾರೆ ನಮ್ಮವರು. ಹಾಗೆಂದು ಎಲ್ಲದರಲ್ಲೂ ತಪ್ಪಿರಲ್ಲ. ಅಷ್ಟೋ ಇಷ್ಟೋ ಒಳಿತೂ ಇರುತ್ತದೆ. ಕೇವಲ ಕೆಲವು ನಂಬಿಕೆಗಳಲ್ಲಿ ಮಾತ್ರ ನಿಜ ಇರುತ್ತದೆ. ಬೇಳೆ ತಿಂದರೆ ಕೀವು ಆಗುತ್ತದೆ ಎಂಬುದು ಸಮಾಜದಲ್ಲಿ ಇರುವ ಒಂದು ದೊಡ್ಡ ಮೂಢನಂಬಿಕೆ.


ನಿಜವಾಗಿ ಗಾಯವಾದರೆ ಅದು ಬೇಗ ಗುಣವಾಗಬೇಕಾದರೆ ಬೇಳೆ ತಿನ್ನುವುದು ಒಳಿತು. ಇಷ್ಟಕ್ಕೂ ಕೀವು ಎಂದರೆ ಏನು? ಗಾಯವಾದಾಗ ಆ ಗಾಯದ ರಂಧ್ರದ ಸುತ್ತಲೂ ಕನ್ನಹಾಕಿ ಕಳ್ಳರು ನುಗ್ಗಿದಂತೆ ರೋಗಕಾರಕ ಬ್ಯಾಕ್ಟೀರಿಯಾ ಇನ್ನಿತರೆ ಪರಾವಲಂಬಿ ಜೀವಿಗಳು ದೇಹಕ್ಕೆ ಪ್ರವೇಶಿಸಿ, ಅವುಗಳ ಜತೆ ಹೋರಾಡಿ ಮರಣಿಸಿದ ನಮ್ಮ ಬಿಳಿ ರಕ್ತಕಣಗಳು! ನಮ್ಮ ರಕ್ಷಣಾ ವ್ಯವಸ್ಥೆಯ ಭಾಗವಾಗಿರುವ ಈ ಹುತಾತ್ಮ ವೀರರು ಗಾಯವಾದ ಕಡೆ ಕೀವಾಗಿ ಕಾಣಿಸುತ್ತಾರೆ.

ನಶಿಸಿದ ಈ ಬಿಳಿ ರಕ್ತಕಣಗಳ ಸೈನ್ಯದ ಸ್ಥಾನದಲ್ಲಿ ಹೊಸ ಬಿಳಿ ರಕ್ತಕಣಗಳು ಹುಟ್ಟಬೇಕಾದರೆ ನಮ್ಮ ದೇಹಕ್ಕೆ ಸಾಕಷ್ಟು ಪೋಷಕಾಂಶಗಳು ಬೇಕಾಗುತ್ತವೆ. ಪ್ರೋಟೀನ್, ಕಾರ್ಬೊಹೈಡ್ರೇಟ್‌ಗಳು ಬೇಕು. ಈ ಎರಡೂ ಹೇರಳವಾಗಿರುವ ಆಹಾರ ಪದಾರ್ಥ ಬೇಳೆ. ಚೆನ್ನಾಗಿ ಬೇಯಿಸಿದ ಬೇಳೆ ತಿಂದರೆ ಗಾಯವಾದರೂ ಕೀವು ಆಗಲ್ಲ. ಅಷ್ಟೇ ಅಲ್ಲ ಹುಣ್ಣು ಬೇಗ ವಾಸಿಯಾಗುತ್ತದೆ. ಬೇಳೆ ತಿನ್ನದಿದ್ದರೆ ಗಾಯಕ್ಕೆ ಅಪಾಯ. ಆದಕಾರಣ ಗಾಯ ಆದಾಗ, ಬೇಳೆ ಕಾಳನ್ನು ಚೆನ್ನಾಗಿ ತಿನ್ನಿ. ಬೇಳೆ ಜತೆಗೆ ಗಾಯಗಳು ಆದಾಗ ಪೋಷಕಾಂಶಗಳುಳ್ಳ ಪ್ರೋಟೀನ್, ಕಾರ್ಬೊಹೈಡ್ರೇಟ್ ಇರುವ ಆಹಾರ ಹೆಚ್ಚಾಗಿ ಸೇವಿಸಬೇಕು.

ಕೇವಲ ಬೇಳೆ ಅಷ್ಟೇ ಅಲ್ಲ ಗಾಯ ಆದಾಗ ಕೆಲವು ಪದಾರ್ಥಗಳನ್ನು ತಿಂದರೆ ಕೀವು ತುಂಬಿಕೊಳ್ಳುತ್ತದೆ ಎನ್ನುತ್ತಾರೆ. ಆದರೆ ಪ್ರೋಟೀನ್ ಇರುವ ಆಹಾರ ತಿನ್ನುವುದರಿಂದ ಯಾವುದೇ ರೀತಿಯ ಕೀವು ಉಂಟಾಗಲ್ಲ. ಆದ್ದರಿಂದ ನಿರ್ಭಯವಾಗಿ ಪ್ರೋಟೀನ್‌ಗಳು, ಕಾರ್ಬೊಹೈಡ್ರೇಟ್ ಇರುವ ಆಹಾರ ತಿನ್ನಿ. ಮುಖ್ಯವಾಗಿ ಬೇಳೆಯಲ್ಲಿ ಹೆಚ್ಚಾಗಿ ಪ್ರೋಟೀನ್ ಅಂಶ ಇರುತ್ತದೆ. ಇದು ದೇಹಕ್ಕೆ ಅಗತ್ಯ ಕೂಡ. ಅದು ಕಡಲೆ ಬೇಳೆ, ತೊಗರಿ ಬೇಳೆ ಇನ್ಯಾವುದೇ ಬೇಳೆ ಆದರೂ ಪರವಾಗಿಲ್ಲ.

ಮನೆಮದ್ದು

ಅನಿಮಿಯಾದಿಂದ ಕಾಲು ನೋವು, ಸುಸ್ತು ಇದ್ದರೆ ಒಂದು ಲೋಟ ಬಿಸಿ ಹಾಲಿಗೆ ಚಿಟಿಕೆ ಏಲಕ್ಕಿ ಪುಡಿ, ಒಂದು ಚಮಚ ಅರಿಶಿನ ಪುಡಿ ಬೆರೆಸಿ ರಾತ್ರಿ ಊಟವಾದ 2 ಗಂಟೆ ನಂತರ ಮಲಗುವ ಮುನ್ನ ಕುಡಿದರೆ ನೋವು ಮತ್ತು ಸುಸ್ತು ನಿವಾರಣೆಯಾಗುತ್ತದೆ.

No comments