Header Ads

test

ಮಾರಕ ಕ್ಯಾನ್ಸರ್ ರೋಗವನ್ನು ಗೆದ್ದು ಬಂದ ಯುವತಿ: ಶಿವಮೊಗ್ಗದ ಈ ಯುವತಿಗೆ ಬಂತು ಸಾಹಿತ್ಯ ಅಕಾಡೆಮಿ ಗೌರವ!

ಸಾವು ಕಣ್ಣೆದುರು ಬಂದು ನಿಂತರೆ ಮನುಷ್ಯ ಒಮ್ಮೆಲೇ ಭಯಭಿತನಾಗೋದು ಸಹಜ! ಗೊತ್ತಿಲ್ಲದೆ ಬರುವ ಸಾವು ಒಂಥರ, ಆದ್ರೆ ಯಮ ಎದುರಲ್ಲೇ ಬಂದು ನಿಂತು, ಸಾವಿನೊಂದಿಗೆ ಸೆಣಸು ಅಂದ್ರೆ ನರಮನುಷ್ಯನಿಗೆ ಧೈರ್ಯ ಬರುವುದು ಹೇಗೆ ಹೀಗೆ ಎದುರಲ್ಲಿ ಬಂದು ನಿಂತ ಸಾವನ್ನು ಅದಮ್ಯ ಜೀವನ ಪ್ರೀತಿಯಿಂದ ನಾಚುವಂತೆ ಮಾಡಿ, ಮತ್ತೊಮ್ಮೆ ಹತ್ತಿರ ಸುಳಿಯುವುದಕ್ಕೂ ಸಾವು ಹೆದರುವಂತೆ ಮಾಡಿದ ಗಟ್ಟಿಗಿತ್ತಿ ಶ್ರುತಿ ಬಿ.ಎಸ್. ನಮ್ಮ ಈ ವಾರದ ಸಾಧಕಿ. ಹುಟ್ಟಿದ್ದು, ಶಿವಮೊಗ್ಗದ ಹೊಸನಗರದ ಬಾಣಿಗ ಎಂಬ ಪುಟ್ಟ ಊರಿನಲ್ಲಿ. ಬೆಳೆದಿದ್ದು, ಓದಿದ್ದು ಎಲ್ಲ ಅಲ್ಲೇ. ಬೆಟ್ಟದಷ್ಟು ಪ್ರೀತಿ ತೋರುವ ಅಪ್ಪ ಶ್ರೀಪಾದ ರಾವ್, ಅಮ್ಮ ಸೀಮ, ತಂಗಿ… ಹೀಗೇ ಪುಟ್ಟ ಪ್ರಪ್ರಪಂಚದಲ್ಲಿ ಸಂತೋಷದಿಂದ ಬದುಕುತ್ತಿದ್ದ ಶ್ರುತಿಯವರ ಬದುಕು ಅನಿರೀಕ್ಷಿತ ತಿರುವೊಂದನ್ನು ಪಡೆದಿದ್ದು, ಅವರ ದೇಹದೊಳಗೆ ಕ್ಯಾನ್ಸರ್ ಎಂಬ ಮಾರಣಾಂತಿಕ ಕಾಯಿಲೆಯೊಂದು ಅಡಗಿ ಕುಳಿತಿಡೇ ಎಂಬುದು ತಿಳಿದಾಗ!


ಎರಡು ವರ್ಷಗಳ ಕಾಲ ಕ್ಯಾನ್ಸರ್ ವಿರುದ್ಧ ಹೋರಾಡಿ, ತಮ್ಮ ಮನೋಬಲದಿಂದ, ಅಪ್ಪ-ಅಮ್ಮ, ತಂಗಿ, ವೈದ್ಯರ ಸಹಕಾರದಿಂದ ಕ್ಯಾನ್ಸರ್ ನಿಂದ ಹೊರಬಂದ ಶ್ರುತಿ, ಕಳೆದ 8 ವರ್ಷಗಳ ಹಿಂದೆ ತನ್ನ ಬದುಕಿನಲ್ಲಿ ಇಂಥದೊಂದು ಘಟನೆ ನಡೆದಿತ್ತು ಎಂಬುದನ್ನೇ ಮರೆಯುವ ಮಟ್ಟಿಗೆ ಬದಲಾಗಿದ್ದಾರೆ. ಕ್ಯಾನ್ಸರ್ ಜೊತೆಗಿನ ಅವರ ಹೋರಾಟದ ಅನುಭವನ್ನು ಸಮರ್ಥ ರೀತಿಯಲ್ಲಿ ಕಟ್ಟಿಕೊಡುವ ‘ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೋಮಾ’ ಎಂಬ ಅವರ ಚೊಚ್ಚಲಕೃತಿಗೆ ಸಾಹಿತ್ಯ ಅಕಾಡೆಮಿ ಗೌರವವೂ ಸಂದಿದೆ.ತಮ್ಮಂತೇ ಕ್ಯಾನ್ಸರ್ ಎಂಬ ಯಮರೂಪಿ ರೋಗದೊಂದಿಗೆ ಸೆಣೆಸುತ್ತಿರುವ ಲಕ್ಷಾಂತರ ಜನರಿಗೆ ‘ಮನೋಬಲ, ಸಂಕಲ್ಪ ಶಕ್ತಿಯಿದ್ದರೆ, ಕ್ಯಾನ್ಸರ್ ಅನ್ನು ಗೆಲ್ಲುವುದು ದೊಡ್ಡ ಮಾತಲ್ಲ’ ಎನ್ನುವ ಶ್ರುತಿ ಅವರು, ಒನ್ ಇಂಡಿಯಾಕ್ಕೆ ನೀಡಿದ ಸಂದರ್ಶನ ಇಲ್ಲಿದೆ.

ಕ್ಯಾನ್ಸರ್ ಅನ್ನು ಕನಸಲ್ಲೂ ಊಹಿಸಿರಲಿಲ್ಲ!‘ಎಲ್ಲರಂತೆಯೇ ಆಡುತ್ತ, ಕುಣಿಯುತ್ತ ಬೆಳೆದವಳು ನಾನು. ಕಾಲು ನೋವು ಆಗಾಗ ಬರ್ತಾ ಇದ್ರೂ ಅವೆಲ್ಲ ಮಾಮೂಲು ಎಂದುಕೊಂಡು ಅವನ್ನೆಲ್ಲ ಗಂಭೀರವಾಗಿ ಪರಿಗಣಿಸದ ಮನಸ್ಥಿತಿಯಿಂದ ನಾನೂ ಹೊರತಾಗಿರಲಿಲ್ಲ. ಆದರೆ ಒಂದು ದಿನ ಕಾಲೇಜಿನಲ್ಲಿ ಕುಳಿತಿದ್ದಾಗ ಆರಂಭವಾದ ಅಸಾಧ್ಯ ಕಾಲು ನೋವು ನನ್ನನ್ನು ಹೈರಾಣಾಗಿಸಿತ್ತು. ಅದನ್ನು ನಿರ್ಲಕ್ಷ್ಯಿಸುವುದು ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ. ಆಗಲೇ ವೈದ್ಯರ ಬಳಿಗೆ ಓಡಿದೆ. ಎಕ್ಸ್ ರೇ ಮಾಡಿದ ಅವರು, ತಕ್ಷಣವೇ ಮಣಿಪಾಲಕ್ಕೆ ಹೋಗಿ, ತಡಮಾಡಲೇಬೇಡಿ ಅಂದಾಗ ಯಾವುದೋ ಅಪಾಯದ ಸೂಚನೆ ಸಿಕ್ಕಿತ್ತಾದರೂ, ಕ್ಯಾನ್ಸರ್ ಇದ್ದೀತು ಎಂಬೆಲ್ಲ ಯೋಚನೆ ಕನಸಲ್ಲೂ ಸುಳಲಿದಿರಲಿಲ್ಲ.’

ಬಯಾಪ್ಸಿ ರಿಪೋರ್ಟ್ ನಲ್ಲಿ ಕ್ಯಾನ್ಸರ್ ನಮೂದಾಗಿತ್ತು!‘ನಂತರ ಮಣಿಪಾಲಕ್ಕೆ ಹೋದಾಗ ವೈದ್ಯರು ಪರೀಕ್ಷಿಸಿ, ಎಂಟ್ಹತ್ತು ದಿನದಲ್ಲಿ ಬಂದ ಬಯಾಪ್ಸಿ ರಿಪೋರ್ಟ್ ಪ್ರಕಾರ ನನಗೆ ಆಸ್ಟಿಯೋ ಸರ್ಕೊಮಾ ಅಂದರೆ ಮೂಳೆ ಕ್ಯಾನ್ಸರ್ ಕಾಯಿಲೆಯಿದೆ ಎಂದು ಅಪ್ಪನಿಗೆ ತಿಳಿಸಿದರು. ನನ್ನ ದೇಹದೊಳಗೆ ಇಂಥದೊಂದು ಮಾರಣಾಂತಿಕ ಕಾಯಿಲೆ ಹೊಂಚುಹಾಕುತ್ತ ಕೂತಿದೆ ಎಂಬ ಯಾವ ಊಹೆಯೂ ಇರದ ನನಗೆ ಅಪ್ಪನ ಮಾತನ್ನು ಎಷ್ಟೋ ಹೊತ್ತುಗಳ ಕಾಲ ಅರಗಿಸಿಕೊಳ್ಳುವುದಕ್ಕಾಗಲಿಲ್ಲ. ಎರಡು ತಾಸು ಏಕಾಂಗಿಯಾಗಿ ಕೂತೆ, ಅರಿಯದ ನಿರ್ಲಿಪ್ತ ಭಾವ. ಯಾಕೋ ಅನ್ನಿಸಿತು, ‘ಕ್ಯಾನ್ಸರ್ ಇದೆ ಅನ್ನೋದು ಸತ್ಯ. ನಾನು ಕುಗ್ಗಿದರೆ ಮನೆಯವರೆಲ್ಲರಿಗೂ ಸಾಂತ್ವನ ಹೇಳೋದ್ಯಾರು. ಹಣೆಯಲ್ಲಿ ಬರೆದಿದ್ದಾಗಲಿ. ನಾವೆಲ್ಲ ವಿಧಿಯ ಬೊಂಬೆಗಳಾಗಿರುವಾಗ ನಮ್ಮ ಪಾತ್ರ ನಿರ್ವಹಿಸೋಣ’ ಅಂತ. ನನಗೆ ನಾನೇ ಸಮಾಧಾನ ಹೇಳಿಕೊಂಡು ಅಪ್ಪ, ವೈದ್ಯರ ಬಳಿ ನಿಂತು ಕೇಳಿದೆ, ‘ಮುಂದೇನು?’ ಬಹುಶಃ ಅಲ್ಲಿಂದಲೇ ಶುರುವಾಗಿದ್ದು ಹೊಸ ಬದುಕು!’

ಬಸವಳಿಸಿದ ಕಿಮೋಥೆರಪಿಕಾಲಿನ ಶಸ್ತ್ರ ಚಿಕಿತ್ಸೆ ಮಾಡಿ, ಆರು ಇಂಚು ಉದ್ದದ ಮೂಳೆಯನ್ನು ಕತ್ತರಿಸಿ, ಆ ಜಾಗದಲ್ಲಿ ಕೃತಕ ಮೂಳೆಯನ್ನು ಹಾಕಲಾಯ್ತು. ಮೊದಲ ಕಿಮೋಥೆರಪಿಯಾದಾಗ ಕೂದಲು ಉದುರಿದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ಏನೂ ಅನ್ನಿಸಲೂ ಇಲ್ಲ. ಆದರೆ ನಂತರ ಒಂದೊಂದು ಕಿಮೋಥೆರಪಿ ಮುಗಿಯುವ ಹೊತ್ತಿಗೆ ನಾನು ಬಸವಳಿದುಹೋಗಿದ್ದೆ. ದೇಹವನ್ನೆಲ್ಲ ಶೋಧಿಸಿದರೂ ಒಂದು ಹಿಡಿ ಶಕ್ತಿಯೂ ಸಿಗದ ಹಾಗೆ ಸೋತಿದ್ದೆ. ಏನೇ ತಿಂದರೂ ವಾಂತಿ, ಬಾಯಲ್ಲೆಲ್ಲ ಹುಣ್ಣುಗಳು, ಆಸಿಡಿಟಿ ಸಮಸ್ಯೆ, ಕೊನೆಗೆ ಡಿಹೈಡ್ರೇಶನ್ ಆಗಿ ಬಾಯಿ, ತುಟಿಯೆಲ್ಲ ನೀಲಿಯಾಗಿ ಸಾವಿನ ಅಂಚನ್ನು ಮುಟ್ಟಿಬಂದಂಥ ಅನುಭವ. ಆದರೂ ಅದೇನೂ ವಭರವಸೆ, ನಾನು ಬದುಕುತ್ತೇನೆ ಅಂತ. ನನ್ನ ಭರವಸೆ ಸುಳ್ಳಾಗಲಿಲ್ಲ.

ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೊಮಾ!‘ಕ್ಯಾನ್ಸರ್ ನಿಂದ ಬಳಲಿದ ಆ ಎರಡು ವರ್ಷ, ಬದುಕಿನ ದಿಕ್ಕನ್ನೇ ಬದಲಿಸಿಬಿಟ್ಟಿತ್ತು. ಆ ಅನುಭವವನ್ನೆಲ್ಲ ಬರೆದು ಹಗುರಾಗುವ ತವಕ ಕಾಡತೊಡಗಿತ್ತು. ಹೇಗೂ ಆ ಸಂಕಷ್ಟದ ಘಟನೆಗಳೆಲ್ಲ ಮನಸ್ಸಿನಲ್ಲಿ ಅಚ್ಚಳಿಯದೆ ನೆನಪಲ್ಲಿದ್ದವು. ಅವನ್ನೆಲ್ಲ ಬರೆಯುತ್ತ ಹೋದೆ. ಅದೊಂದು ಪುಸ್ತಕವೇ ಆಯಿತು. ‘ಬದುಕ ದಿಕ್ಕು ಬದಲಿಸಿದ ಆಸ್ಟಿಯೋ ಸರ್ಕೊಮಾ!- ವಿಧಿಯ ಕೈಯೊಳಗಾಡೋ ಗೊಂಬೆಗಳು ನಾವು’ ಎಂಬ ಆ ಪುಸ್ತಕವನ್ನು ಗೋಮಿನಿ ಪ್ರಕಾಶನ ಪ್ರಕಟಿಸಿತು. ಅದೃಷ್ಟವೆಂಬಂತೆ ನನ್ನ ಈ ಮೊದಲ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಗೌರವ ಲಭಿಸಿತು.’

ಒಳಿತಿಗೆ ಹಾರೈಸಿದವರು ನೂರಾರು ಜನಕ್ಯಾನ್ಸರ್ ನಿಂದ ಬಳಲುತ್ತಿದ್ದ ನನ್ನ ಒಳಿತಿಗಾಗಿ ಹಾರೈಸಿದವರು ನೂರಾರು ಜನ. ನಿದ್ದೆ ಬಿಟ್ಟು ನನ್ನನ್ನು ಕಾದವರು ಅಪ್ಪ-ಅಮ್ಮ, ತಂಗಿ, ಅಜ್ಜಿ, ಬಂಧುಗಳು. ನನ್ನನ್ನು ತಮ್ಮ ಮಗಳೆಂಬಷ್ಟು ಅಕ್ಕರೆಯಿಂದ ನೋಡಿ, ನನ್ನ ಬದುಕಿಸುವುದಕ್ಕೆ ಹರಸಾಹಸಪಟ್ಟ ಭಾಸ್ಕರಾನಂದ್, ವಾದಿರಾಜ್ ಮುಂತಾದ ವೈದ್ಯರು.. ಹೀಗೆ ಸುತ್ತಲ ಜನರ ಪ್ರೀತಿ-ಅಕ್ಕರೆ ಬದುಕುವುದಕ್ಕೆ, ಬದುಕನ್ನು ಮತ್ತಷ್ಟು ಪ್ರೀತಿಸುವುದಕ್ಕೆ ಕಲಿಸಿತು.

ಸಾವನ್ನು ಗೆದ್ದವರು ಸ್ಫೂರ್ತಿಯಾದರು‘ಎರಡು ಬಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾದರೂ ಮನೋಬಲದಿಂದ ಬದುಕುಳಿದು, ನಂತರ ವಿಶ್ವದ ಅತೀ ಎತ್ತರದ ಮೌಂಟ್ ಎವರೆಸ್ಟ್ ಏರಿದ ಸಾನ್ ಸ್ವಾರ್ನರ್ ನನಗೆ ಸ್ಫೂರ್ತಿ. ಕಿಮೋಥೆರಪಿ ಪಡೆಯುತ್ತಿದ್ದ ಸಮಯದಲ್ಲಿ ಅವರನ್ನು ಮೇಲ್ ಮೂಲಕ ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸುತ್ತಾರೆ ಎಂಬ ಯಾವ ಭರವಸೆಯೂ ಇರಲಿಲ್ಲ. ಆದರೆ ಸೆಲಿಬ್ರಿಟಿ ಎಂಬ ಯಾವ ಧಿಮಾಕಿಲ್ಲದೆ, ನನಗೂ ಅವರು ಮೇಲ್ ಮಾಡಿ ಧೈರ್ಯ ತುಂಬಿದ್ದರು. ಅವರಂತೆಯೇ ಕ್ಯಾನ್ಸರ್ ಗೆ ತುತ್ತಾದ ಹಲವರನ್ನು ಆನ್ ಲೈನ್ ನಲ್ಲಿ ಸಂಪರ್ಕಿಸಿ ಅವರಿಂದ ಸಲಹೆಗಳನ್ನು ಪಡೆದೆ. ನಾನು ಬೇಗನೇ ಗುಣಮುಖಳಾಗುವುದಕ್ಕೆ ಇದೂ ಮುಖ್ಯ ಕಾರಣ. ಇದೀಗ ನನ್ನಂತೇ ಕ್ಯಾನ್ಸರ್ ರೋಗಕ್ಕೆ ತುತ್ತಾದವರಿಗೆ ಸಲಹೆ, ಸೂಚನೆಗಳನ್ನು ನೀಡದಿ, ಅವರಲ್ಲೂ ಧನಾತ್ಮಕ ಮನೋಭಾವವನ್ನು ಬಿತ್ತುವ ಕೆಲಸವನ್ನು ನನ್ನ ಕೈಲಾದ ಮಟ್ಟಿಗೆ ಮಾಡುತ್ತಿದ್ದೇನೆ.’

‘ಎರಡು ಬಾರಿ ಕ್ಯಾನ್ಸರ್ ರೋಗಕ್ಕೆ ತುತ್ತಾದರೂ ಮನೋಬಲದಿಂದ ಬದುಕುಳಿದು, ನಂತರ ವಿಶ್ವದ ಅತೀ ಎತ್ತರದ ಮೌಂಟ್ ಎವರೆಸ್ಟ್ ಏರಿದ ಸಾನ್ ಸ್ವಾರ್ನರ್ ನನಗೆ ಸ್ಫೂರ್ತಿ. ಕಿಮೋಥೆರಪಿ ಪಡೆಯುತ್ತಿದ್ದ ಸಮಯದಲ್ಲಿ ಅವರನ್ನು ಮೇಲ್ ಮೂಲಕ ಸಂಪರ್ಕಿಸಿದಾಗ ಅವರು ಪ್ರತಿಕ್ರಿಯಿಸುತ್ತಾರೆ ಎಂಬ ಯಾವ ಭರವಸೆಯೂ ಇರಲಿಲ್ಲ. ಆದರೆ ಸೆಲಿಬ್ರಿಟಿ ಎಂಬ ಯಾವ ಧಿಮಾಕಿಲ್ಲದೆ, ನನಗೂ ಅವರು ಮೇಲ್ ಮಾಡಿ ಧೈರ್ಯ ತುಂಬಿದ್ದರು. ಅವರಂತೆಯೇ ಕ್ಯಾನ್ಸರ್ ಗೆ ತುತ್ತಾದ ಹಲವರನ್ನು ಆನ್ ಲೈನ್ ನಲ್ಲಿ ಸಂಪರ್ಕಿಸಿ ಅವರಿಂದ ಸಲಹೆಗಳನ್ನು ಪಡೆದೆ. ನಾನು ಬೇಗನೇ ಗುಣಮುಖಳಾಗುವುದಕ್ಕೆ ಇದೂ ಮುಖ್ಯ ಕಾರಣ. ಇದೀಗ ನನ್ನಂತೇ ಕ್ಯಾನ್ಸರ್ ರೋಗಕ್ಕೆ ತುತ್ತಾದವರಿಗೆ ಸಲಹೆ, ಸೂಚನೆಗಳನ್ನು ನೀಡದಿ, ಅವರಲ್ಲೂ ಧನಾತ್ಮಕ ಮನೋಭಾವವನ್ನು ಬಿತ್ತುವ ಕೆಲಸವನ್ನು ನನ್ನ ಕೈಲಾದ ಮಟ್ಟಿಗೆ ಮಾಡುತ್ತಿದ್ದೇನೆ.’

ನಂಬಿಕೆ, ಭರವಸೆ ಬತ್ತದಿರಲಿ…‘ಇತ್ತೀಚೆಗೆ ಕ್ಯಾನ್ಸರ್ ರೋಗದಿಂದ ಬಳಲುವವರು ಸಾಕಷ್ಟು ಜನರಿದ್ದಾರೆ. ತಂತ್ರಜ್ಞಾನ ಇಷ್ಟೆಲ್ಲ ಮುಂದುವರಿದ ಈ ಹೊತ್ತಿನಲ್ಲಿ ಕ್ಯಾನ್ಸರ್ ಬಂದಿದೆಯೆಂದು ತೀರಾ ಹತಾಶರಾಗುವ ಅಗತ್ಯವಿಲ್ಲ. ಮನೋಬಲವಿದ್ದರೆ ಮಾರಣಾಂತಿಕ ಕಾಯಿಲೆಯನ್ನೂ ಹಿಮ್ಮೆಟ್ಟಿಸಬಹುದು. ವೈದ್ಯರ ಮೇಲೆ ನಂಬಿಕೆ, ಪಡೆವ ಚಿಕಿತ್ಸೆಯ ಮೇಲೆ ಭರವಸೆ, ನಮ್ಮೊಳಗೆ ಎಂದಿಗೂ ಬತ್ತದ ಜೀವನಪ್ರೀತಿ ಇದ್ದರೆ ಕ್ಯಾನ್ಸರ್ ನಂಥ ನೂರಾರು ಭೂತವನ್ನು ಬದಿಗಟ್ಟಬಹುದು.’

No comments