Header Ads

test

ನಿಜವಾದ ಪ್ರೀತಿ ಎಂದರೆ ಇವರದು... ಈ ಪ್ರೇಮ ಜೋಡಿ ಬಗ್ಗೆ ಗೊತ್ತಾದರೆ...

ಪ್ರೀತಿ ಎಂದರೆ ಒಂದು ನಂಬಿಕೆ. ಒಂದು ಜವಾಬ್ದಾರಿ. ಒಂದು ಭರವಸೆ. ಈ ಮೂರರಲ್ಲಿ ಏನೇ ಲೋಪಿಸಿದರೂ ಆ ಪ್ರೀತಿಗೆ ಅರ್ಥ ಇರಲ್ಲ. ನಿಜವಾದ ಪ್ರೀತಿಯಲ್ಲಿ ಈ ಮೂರು ಎಂದಿಗೂ ಲೋಪಿಸಲ್ಲ. ಪ್ರೇಮಿಗಳ ದಿನಾಚರಣೆ ಎಂದರೆ ನಿತ್ಯ ಬಿಡುವ ಹೂಗಳನ್ನು ನಿತ್ಯ ತಂದು, ಹುಡುಗನಿಗೋ, ಹುಡುಗಿಗೋ ಕೊಟ್ಟು ನೀನೆಂದರೆ ನನಗಿಷ್ಟ, ನೀನು ನನ್ನೊಂದಿಗೆ ಇಲ್ಲದಿದ್ದರೆ ಕಷ್ಟ ಎಂದು ಪಾರ್ಕ್‌ಗಳಲ್ಲಿ ಗೋಗರೆಯುವ ಜೋಡಿಗಳು ಪ್ರತಿ ವಾಲೆಂಟೆನ್ಸ್ ಡೇ ದಿನ ಕಾಣಿಸುತ್ತವೆ. ಆ ಪ್ರೇಮ ಜೋಡಿಗಳಲ್ಲಿ ಎಷ್ಟು ಮದುವೆವರೆಗೂ ಹೋಗುತ್ತವೆ ಎಂಬುದೇ ಸಂದೇಹ. ಆದರೆ ಪ್ರೀತಿಸಿದ ವ್ಯಕ್ತಿಗೆ ಎಷ್ಟೇ ಕಷ್ಟ ಬಂದರೂ ಜತೆಯಾಗಿ ನಿಂತು ಭರವಸೆಯನ್ನು ನೀಡುವ ಪ್ರೇಮಿಗಳು ಅಪರೂಪಕ್ಕೆ ಇರುತ್ತಾರೆ. ವ್ಯಾಲೆಂಟೇನ್ಸ್ ಡೇ ಸಂದರ್ಭದಲ್ಲಿ ಅಂತಹ ಪ್ರೀತಿಯ ಜೋಡಿಯ ಬಗ್ಗೆ ವಿಶೇಷ ಕಥೆ.


ಕೇರಳದಲ್ಲಿನ ಪೊತ್ತುಕಲ್ ಪಟ್ಟಣದ ಸಚಿನ್ ಕುಮಾರ್ ನಿಲಂಬೂರು‍ನಲ್ಲಿ ಅಕೌಂಟೆನ್ಸಿ ಕೋರ್ಸ್ ಮಾಡುತ್ತಿದ್ದಾಗ ಭವ್ಯಾ ಪರಿಚಯವಾದಳು. ಪರಿಚಯ ಸ್ವಲ್ಪ ದಿನಗಳಲ್ಲೇ ಇವರಿಬ್ಬರನ್ನು ಒಳ್ಳೆಯ ಸ್ನೇಹಿತರನ್ನಾಗಿ ಮಾಡಿತು. ಆರು ತಿಂಗಳ ಕಾಲ ಸ್ನೇಹದಿಂದ ಇದ್ದರು. ಈ ಸ್ನೇಹದಲ್ಲಿ ಭವ್ಯಾ ಮೇಲೆ ತುಂಬಾ ಪ್ರೀತಿಯನ್ನು ಬೆಳೆಸಿಕೊಂಡ ಸಚಿನ್ ಕೊನೆಗೂ ಧೈರ್ಯ ಮಾಡಿ ಒಂದು ದಿನ ತನ್ನ ಮನಸ್ಸಿನಲ್ಲಿನ ಮಾತನ್ನು ಹೇಳಿದ. ಸಚಿನ್ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ ಬಳಿಕ ಭವ್ಯಾಳಿಂದ ಯಾವುದೇ ಉತ್ತರ ಸಿಗಲಿಲ್ಲ. ಆಗಲ್ಲ ಎಂದೂ ಹೇಳಲಿಲ್ಲ. ಮೌನ ಅರ್ಧ ಅಂಗೀಕಾರ ಎಂದು ಸಚಿನ್ ತಿಳಿದುಕೊಂಡ.

ಅರ್ಧ ಅಂಗೀಕಾರ ವ್ಯಕ್ತಪಡಿಸಿದ ಆಕೆಯನ್ನು ಅರ್ಧಾಂಗಿ ಮಾಡಿಕೊಂಡು ಆಕೆಯ ಜತೆಗೆ ಏಳು ಹೆಜ್ಜೆ ಹಾಕಬೇಕು ಎಂದು ಸಚಿನ್ ನಿರ್ಧರಿಸಿಕೊಂಡ. ಅವರ ಪ್ರೀತಿಯ ಬಂಧನ ಬಲಗೊಳ್ಳಲು ಎರಡು ತಿಂಗಳ ಕಾಲ ಹಿಡಿಸಿತು. ಈ ಕಾಲಾವಧಿಯಲ್ಲಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡರು. ಸುಖ ಸಂತೋಷಗಳಲ್ಲಷ್ಟೇ ಅಲ್ಲದೆ, ಕಷ್ಟ ನಷ್ಟಗಳಲ್ಲೂ ಒಬ್ಬರಿಗೊಬ್ಬರು ಜತೆಯಾಗಿ ಇರಬೇಕು ಎಂದುಕೊಂಡರು. ತನ್ನ ಶಿಕ್ಷಣ ಮುಗಿದ ಬಳಿಕ ಪ್ರೀತಿಯ ವಿಷಯವನ್ನು ಹಿರಿಯರಿಗೆ ತಿಳಿಸಿದರು. ಇವರ ಮದುವೆಗೆ ವಿರೋಧ ವ್ಯಕ್ತವಾಯಿತು. ಓಡಿಹೋಗಿ ಮದುವೆಯಾಗೋಣ ಎಂದು ಭಾವಿಸಲಿಲ್ಲ. ಹಿರಿಯರ ಮನಸ್ಸು ಬದಲಾಗದೆ ಇರುತ್ತದಾ ಎಂದು ಕಾದು ನೋಡಿದರು.

ಇದು ಈ ರೀತಿ ಇದ್ದಾಗಲೇ ಭವ್ಯಾಗೆ ಕಂಪೆನಿಯೊಂದರಲ್ಲಿ ಉದ್ಯೋಗ ಸಿಕ್ಕಿತು. ಆದರೂ, ಸಚಿನ್ ಭವ್ಯಾ ಪ್ರತಿದಿನ ಭೇಟಿಯಾಗುತ್ತಿದ್ದರು. ಆದರೆ ಒಂದು ದಿನ ಸಚಿನ್‌ರನ್ನು ಭೇಟಿಯಾದ ಭವ್ಯಾ ತನಗೆ ಬೆನ್ನು ನೋಯುತ್ತಿದೆ ಎಂದು ಹೇಳಿದರು. ನಿತ್ಯ ಬಸ್ಸಿನಲ್ಲಿ ಪ್ರಯಾಣಿಸುತ್ತಾಳೆ, ಕುಳಿತು ಮಾಡುವ ಉದ್ಯೋಗ ಆದಕಾರಣ ಬೆನ್ನು ನೋವು ಬರುತ್ತಿರಬಹುದು ಎಂದು ಸಚಿನ್ ಭಾವಿಸಿದ. ಆದರೂ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ. ಎರಡು ವಾರಗಳ ಬಳಿಕ ಸಹ ಭವ್ಯಾ ಪರಿಸ್ಥಿತಿಯಲ್ಲಿ ಯಾವುದೆ ಬದಲಾವಣೆ ಕಾಣಿಸಲಿಲ್ಲ. ಆಸ್ಪತ್ರೆಯೊಂದರಲ್ಲಿ ವೈದ್ಯ ಪರೀಕ್ಷೆಗಳನ್ನು ಮಾಡಿಸಿದ. ಆಕೆಯ ಬೆನ್ನು ನೋವಿಗೆ ಕಾರಣ ಅಪರೂಪದ ಕ್ಯಾನ್ಸರ್ ಎಂದು ಗೊತ್ತಾಯಿತು. ಈ ಸಂಗತಿ ಗೊತ್ತಾದ ಬಳಿಕ ಸಚಿನ್ ಕಣ್ಣೀರಾದ. ತನ್ನ ಭವ್ಯಾಳನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂದುಕೊಂಡ. ಕಿಮೊಥೆರಪಿ ಸಾಧ್ಯವಾದಷ್ಟು ಬೇಗ ಮಾಡಿಸಬೇಕೆಂದು ವೈದ್ಯರು ಸ್ಪಷ್ಟಪಡಿಸಿದರು. ಭವ್ಯಾ ಕುಟುಂಬ ಆರ್ಥಿಕವಾಗಿ ಅಷ್ಟು ಸದೃಢವಾಗಿರಲಿಲ್ಲ. ಕಿಮೊಥೆರಪಿ ಖರ್ಚಿನಿಂದ ಕೂಡಿರುವ ಚಿಕಿತ್ಸೆ ಆದಕಾರಣ ಹಗಲು ರಾತ್ರಿ ಕಷ್ಟಪಟ್ಟು, ಆತ ತನ್ನ ಸ್ನೇಹಿತರ ಬಳಿ ಹಣ ಹೊಂದಿಸಿ ಕಿಮೊಥೆರಪಿ ಮಾಡಿಸಿದ.

ಆದರೆ... ಕಿಮೊಥೆರಪಿ ಒಮ್ಮೆಲೆ ಪೂರ್ಣವಾಗುವ ಪ್ರಕ್ರಿಯೆ ಅಲ್ಲ. ಹಲವು ಸಲ ಕಿಮೊಥೆರಪಿ ಮಾಡಿಸಬೇಕಾಗುತ್ತದೆ. ಮಾಡಿಸಿದ ಪ್ರತಿ ಸಲ ಸಾವಿರಾರು ರೂ. ಖರ್ಚಾಗುತ್ತದೆ. ಅದಾಗಲೇ ರೇಡಿಯೇಷನ್ ತೀವ್ರತೆಯ ಕಾರಣ ಭವ್ಯಾ ಕೂದಲೆಲ್ಲಾ ಉದುರಿ ಹೋಗಿತ್ತು. ಬಲಹೀನವಾಗಿ ಕಾಣಿಸಿದಳು. ಭವ್ಯಾ ಅನಾರೋಗ್ಯದಿಂದ ನರಳುತ್ತಿದ್ದರೂ ಆಕೆಯನ್ನೇ ಮದುವೆಯಾಗಬೇಕು ಎಂದು ಸಚಿನ್ ನಿರ್ಧರಿಸಿಕೊಂಡ. ಪರಿಸ್ಥಿತಿಯನ್ನು ಗಮನಿಸಿದ ಎರಡೂ ಕುಟುಂಬದವರು ಮದುವೆಗೆ ಅಡ್ಡಿಪಡಿಸಲಿಲ್ಲ. ಏಪ್ರಿಲ್ 1ರಂದು ಅವರಿಬ್ಬರಿಗೂ ನಿಶ್ಚಿತಾರ್ಥ ನಡೆಯಿತು. ಗಲ್ಫ್‌ಗೆ ಹೋಗಿ ನೆಲೆಸಬೇಕು ಎಂಬುದು ಸಚಿನ್ ಕನಸು. ಆದರೆ ಭವ್ಯಾ ಪರಿಸ್ಥಿತಿ ನೋಡಿ ತನ್ನ ಕನಸನ್ನು ತ್ಯಾಗ ಮಾಡಿದ. ಹಲವು ಸಲ ಕಿಮೊಥೆರಪಿ ಮಾಡಿಸಿದ. ಐದು ತಿಂಗಳ ಬಳಿಕ, ಆರು ಸಲ ಕಿಮೊಥೆರಪಿ ಪೂರ್ಣವಾದ ಬಳಿಕ ಭವ್ಯಾಳನ್ನು ಕಳೆದ ನವೆಂಬರ್‌‍ನಲ್ಲಿ ಸಚಿನ್ ಮದುವೆಯಾದ.

ಮದುವೆಯಾದ ಆರು ದಿನಗಳ ಬಳಿಕ ವೈದ್ಯ ಪರೀಕ್ಷೆಗಳ ನಿಮಿತ್ತ ಹೋದ ಸಚಿನ್, ಭವ್ಯಾಗೆ ಇನ್ನೊಂದು ಶಾಕಿಂಗ್ ಸಂಗತಿ ಗೊತ್ತಾಯಿತು. ರೋಗ ಉಲ್ಬಣಿಸಿದೆ ಎಂದೂ, ಕಿಮೊಥೆರಪಿ ಪ್ರಯೋಜನ ಇಲ್ಲ ಎಂದು, ಟ್ಯೂಮರನ್ನು ಶಸ್ತ್ರಚಿಕಿತ್ಸೆ ಮೂಲಕ ತೊಲಗಿಸಬೇಕು ಎಂದು ವೈದ್ಯರು ತಿಳಿಸಿದರು. ಸಾಕಷ್ಟು ಕಷ್ಟನಷ್ಟಗಳ ನಡುವೆ ಕೊನೆಗೆ ಆಕೆಗೆ ಶಸ್ತ್ರಚಿಕಿತ್ಸೆ ನಡೆಯಿತು. ಆದರೆ ಕ್ಯಾನ್ಸರ್ ಸಂಪೂರ್ಣ ಗುಣವಾಗುತ್ತದೆ ಎಂದು ಖಚಿತವಾಗಿ ಹೇಳಲಾರದ ಪರಿಸ್ಥಿತಿ. ಹಾಗಾಗಿ ಭವ್ಯಾ ವೈದ್ಯಕೀಯ ಚಿಕಿತ್ಸೆಗೆ ಈ ಪ್ರೇಮದ ಜೋಡಿ ದಾನಿಗಳ ಸಹಾಯ ಕೋರಿದೆ. ಸಹಾಯ ಮಾಡುವವರು ಸಚಿನ್ ಫೋನ್ ನಂಬರ್ 86066 82453 ಫೋನ್ ಮಾಡಿ ಸಂಪರ್ಕಿಸಲು ಕೋರಲಾಗಿದೆ.

No comments