Header Ads

test

ಮೋದಿಗೆ ಓಟ್ ಹಾಕಿ.. ಅದೇ ನಮ್ಮ ಮದುವೆಗೆ ಉಡುಗೊರೆ: ಇನ್ನೊಂದು ಟ್ರೆಂಡಿಂಗ್ ವೆಡ್ಡಿಂಗ್ ಕಾರ್ಡ್

ಮದುವೆ ಆಮಂತ್ರಣ ಪತ್ರಿಕೆ ಎಂದರೆ ಮುಖ್ಯವಾಗಿ ವಧು ವರರ ಹೆಸರುಗಳು, ಬಂಧು ಬಳಗ, ಹಿತೈಷಿಗಳು, ಮುಖ್ಯ ಅತಿಥಿಗಳ ಹೆಸರು ಇರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಹೊಸ ಸ್ಟೈಲೊಂದು ಶುರುವಾಗಿದೆ. ಕಾರ್ಡಿನ ಮೇಲೆ ವಧು ವರರ ಫೋಟೋಗಳು, ಶ್ರೀರಸ್ತು... ಶುಭಮಸ್ತು... ಇಂತಹವೆಲ್ಲಾ ಸಾಮಾನ್ಯವಾಗಿ ಎಲ್ಲರೂ ಹಾಕಿಕೊಳ್ಳುವಂತಹವೇ. ಆದರೆ ಇತ್ತೀಚೆಗೆ ಕೆಲವು ಯುವಕರು ಪೊಲಿಟಿಕಲ್’ ವೆಡ್ಡಿಂಗ್ ಕಾರ್ಡುಗಳೊಂದಿಗೆ ಹೊಸ ಟ್ರೆಂಡ್ ಸೃಷ್ಟಿಸುತ್ತಿದ್ದಾರೆ.



ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ ಥೀಮ್‌ನೊಂದಿಗೆ ಈ ಕಾರ್ಡನ್ನು ಹೆಚ್ಚಾಗಿ ತರುತ್ತಿದ್ದಾರೆ. ಇತ್ತೀಚೆಗೆ ಒಂದು ಜೋಡಿ ರಫೇಲ್ ಡೀಲ್‌ನಲ್ಲಿ ಯಾವುದೇ ಮೋಸ ನಡೆದಿಲ್ಲ ಎಂದು ಹೇಳುತ್ತಾ ಮದುವೆ ಆಮಂತ್ರಣವನ್ನು ಪ್ರಿಂಟ್ ಮಾಡಿಸಿ ಸುದ್ದಿಯಾಗಿದ್ದರು. ಆ ಬಳಿಕ ಮೋದಿ ಅವರಿಗೆ ಶುಭಾಶಯವನ್ನೂ ತಿಳಿಸಿದ್ದರು.

ಸೇಮ್ ಇದೇ ರೀತಿ ನಮ್ಮದೇ ರಾಜ್ಯದಲ್ಲಿ ನಡೆದಿದೆ. ಇನ್ನೊಂದು ಜೋಡಿಯೊಂದು ಈಗ ಪೊಲಿಟಿಕಲ್ ವೆಡ್ಡಿಂಗ್ ಕಾರ್ಡ್ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ದಾವಣಗೆರೆ ನಿವಾಸಿಯಾದ ನಾಗರಾಜ್ ಪ್ರಧಾನಿ ಮೋದಿ ಅವರ ಅಭಿಮಾನಿ. ಆತ ಫೆಬ್ರವರಿ 8ರಂದು ರೇಖಾ ಎಂಬುವವರನ್ನು ಮದುವೆಯಾಗುತ್ತಿದ್ದಾರೆ. ಆತ ತನ್ನ ಮದುವೆ ಕಾರ್ಡಿನ ಮೇಲೆ ಮೋದಿ ಫೋಟೋ ಅಚ್ಚು ಹಾಕಿಸಿದ್ದಾನೆ.

"2019ರ ಲೋಕಸಭೆ ಚುನಾವಣೆಯಲ್ಲಿ ಮೋದಿಗೆ ಮತ ಹಾಕಿ. ಇದೇ ನನ್ನ ಮದುವೆಗೆ ನೀವು ಕೊಡುವ ಉಡುಗೊರೆ" ಎಂದು ಕಾರ್ಡಿನ ಮೇಲೆ ಹಾಕಿಸಿದ್ದಾರೆ. ಅದೇ ರೀತಿ ಸ್ವಚ್ಛ ಭಾರತ್ ಲೋಗೋವನ್ನೂ ಅದರ ಮೇಲೆ ಪ್ರಿಂಟ್ ಹಾಕಿಸಿದ್ದಾನೆ. ಮದುವೆಗೆ ಕರೆಯಲು ಆ ಕಾರ್ಡ್ ಹಿಡಿದು ಬಂಧುಗಳ ಮನೆಗೆ ಹೋಗುತ್ತಿರುವ ನಾಗರಾಜ್ ಅಣ್ಣ ಶಿವ ಕುಮಾರ್ "ದೇಶಕ್ಕೆ ಮತ್ತೊಮ್ಮೆ ಪ್ರಧಾನಿ ಆಗುವ ಅರ್ಹತೆ ಮೋದಿಗೆ ಇದೆ" ಎಂದು ಹೇಳುತ್ತಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಕು ಎಂದು ನೆಂಟರನ್ನು ಕೋರುತ್ತಿದ್ದಾನೆ.

ಕೆಲ ದಿನಗಳ ಹಿಂದೆ ಮಂಗಳೂರಿನ ಪದವಿನಂಗಡಿ ಭಟ್ರಕುಮೇರು ನಿವಾಸಿ ಜಯಂತಿ ಎಂಬವರ ಸುಪುತ್ರ ಪ್ರವೀಣ್, ತಮ್ಮ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಪ್ರಧಾನಿ ಮೋದಿಗಾಗಿ ವಿಶೇಷ ಮನವಿ ಮಾಡಿಕೊಂಡಿದ್ದು, 'ತಮ್ಮ ಸಂತಸದ ನಗುಮುಖದ ಆಗಮನವೇ ಆಶೀರ್ವಾದ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅವರನ್ನು ಬೆಂಬಲಿಸಿ ನೀಡುವ ಮತವೇ ಉಡುಗೊರೆ' ಎಂದು ಅಚ್ಚು ಹಾಕಿಸಿದ್ದಾರೆ.

ಪ್ರವೀಣ್ ಅವರು ಪ್ರಸ್ತುತ ದುಬೈಯಲ್ಲಿ ಉದ್ಯೋಗದಲ್ಲಿದ್ದು, ಅವರಿಗೆ ಮೋದಿ ಅವರ ಆಡಳಿತ ಮೇಲೆ ಅಭಿಮಾನ. ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದ ಇವರು ಊರಿನಲ್ಲಿದ್ದಾಗ ಸಂಘಸಂಸ್ಥೆಗಳ ಜತೆ ಹೆಚ್ಚು ಸಕ್ರಿಯರಾಗಿದ್ದರು.

No comments