Header Ads

test

ಚಹಾ ಮಾರುತ್ತಾ 80 ಮಂದಿ ಸ್ಲಂ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ದೇವರಪಳ್ಳಿ ಪ್ರಕಾಶ್ ರಾವ್..ಹ್ಯಾಟ್ಸ್‌ಆಫ್ಸಾರ್..!

ಬಹಳಷ್ಟು ಮಂದಿಗೆ ತಮ್ಮ ಕನಸನ್ನು ಸಾಕಾರ ಮಾಡಿಕೊಳ್ಳಲು ಇಡೀ ಜೀವನವನ್ನೇ ಕಾಯುತ್ತಾರೆ. ನಿರುದ್ಯೋಗ, ಹಣದುಬ್ಬರ, ತೀವ್ರ ಸ್ಪರ್ಧೆಯ ಕಾರಣ ಹಣ ಸಂಪಾದಿಸುವುದು ಹಿಂದೆಂದಿಗಿಂತ ಈಗ ಕಷ್ಟಕರವಾಗಿದೆ. ಉದ್ಯೋಗ ಸಿಕ್ಕಿದರೆ ನಾನು ಯಾರಿಗಾದರೂ ಸಹಾಯ ಮಾಡಬಹುದು ಎನ್ನುವವರು ಕೆಲವರಾದರೆ, ಉದ್ಯೋಗದಲ್ಲಿರುವವರು ಸಂಬಳ ಜಾಸ್ತಿ ಆದರೆ ಏನಾದರೂ ಮಾಡಬಹುದು ಎಂದು ಚಿಂತಿಸುತ್ತಾರೆ. ಮಾಡಬೇಕು ಎಂಬ ಮನಸ್ಸು ಇಲ್ಲದಿದ್ದರೆ ಎಷ್ಟೇ ದುಡ್ಡು ಇದ್ದರೂ ಅವರು ಮಾಡಲ್ಲ.ಆದರೆ ಒಡಿಶಾದ ಈ ಚಹಾ ಮಾರುವರು ಮಾತ್ರ ಎಲ್ಲರಿಗಿಂತ ಭಿನ್ನ. ಇವರ ಹೆಸರು ದೇವರಪಲ್ಲಿ ಪ್ರಕಾಶ್ ರಾವ್. ಇವರು ಕಟಕ್‍ನ ಬಕ್ಷಿಬಜಾರ್‌ನಲ್ಲಿ ಚಹಾ ಮಾರುತ್ತಿರುತ್ತಾರೆ. ಕಳೆದ 50 ವರ್ಷಗಳಿಂದ ಇವರು ಇದೇ ಕಾಯಕ ಮಾಡುತ್ತಾ ಬಂದಿದ್ದಾರೆ. ಇದರಲ್ಲೇನು ವಿಶೇಷ ಎನ್ನುತ್ತೀರಾ? ಇದೇ ಜನವರಿ 25ರಂದು ಅವರಿಗೆ ಅತ್ಯುನ್ನತ ಪುರಸ್ಕಾರ ಪದ್ಮಶ್ರೀಗೆ ಭಾಜನರಾಗಿದ್ದಾರೆ. ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಸಿಗುವಂತಹದ್ದು ಅವರೇನು ಮಾಡಿದ್ದಾರೆ ಎಂದು ನೋಡಿದರೆ ನಿಮಗೂ ಅವರ ಬಗ್ಗೆ ಹೆಮ್ಮೆ ಅನ್ನಿಸುತ್ತದೆ..!

ತಾವು ಚಹಾ ಮಾರಿ ದುಡಿದ ಹಣದಲ್ಲಿ ಒಂದಿಬ್ಬರಲ್ಲ ಬರೋಬ್ಬರಿ 80 ಮಂದಿ ಸ್ಲಂ ಮಕ್ಕಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ. ಬೆಳಗ್ಗೆ 4 ಗಂಟೆಯಿಂದ ಇವರ ಕೆಲಸ ಆರಂಭ. ಬೆಳಗ್ಗೆ 10 ಗಂಟೆ ತನಕ ಕೆಲಸ ಮಾಡುತ್ತಾರೆ. ಇವರು ಬಡ ಮಕ್ಕಳಿಗೆಂದೇ ಒಂದು ಶಾಲೆ ನಡೆಸುತ್ತಿದ್ದಾರೆ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಅವರು ಈ ರೀತಿ ಮಾಡುತ್ತಿದ್ದಾರೆ. ಬಳಿಕ ಆ ಶಾಲೆಯಲ್ಲೇ ಮಕ್ಕಳಿಗೆ ಪಾಠ ಮಾಡುತ್ತಾರೆ.

ರಾವ್ ಅವರಿಗೆ ಓದುವುದು, ಬರೆಯುವುದು ಎಂದರೆ ತುಂಬಾ ಆಸಕ್ತಿ ಇತ್ತು. ಆದರೆ ಇವರ ತಂದೆ ಚಹಾ ಮಾರುತ್ತಿದ್ದರು. ಓದುವುದು ಬೇಡ ಎಂದು ಮಗನನ್ನು ತಮ್ಮ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದರು. ಅದರಂತೆ ಅವರು ಶಿಕ್ಷಣ ಮುಂದುವರೆಸಲು ಸಾಧ್ಯವಾಗಲಿಲ್ಲ. ಹತ್ತನೇ ತರಗತಿಯನ್ನೂ ಪೂರೈಸಲಿಲ್ಲ. ಬಡತನದ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈಗ 80 ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.

ಇವರ ತಂದೆ ಅನಾರೋಗ್ಯಕ್ಕೆ ತುತ್ತಾದಾಗ ರಾವ್ ಅವರು ಟೀ ಲೋಟಗಳ ಜತೆಗೆ ಮತ್ತು ಆಸ್ಪತ್ರೆ ಬಿಲ್ ಕಟ್ಟುವುದರಲ್ಲೇ ಮುಗಿಯುತ್ತಿತ್ತು. ಬಳಿಕ ಟೀ ಸ್ಟಾಲನ್ನು ತಾವೇ ಮುಂದುವರೆಸುತ್ತಿದ್ದರು. ಸಮಾಜಕ್ಕೆ ಏನನ್ನಾದರೂ ಮಾಡಬೇಕು ಎಂಬ ಛಲ ಮಾತ್ರ ಅವರಲ್ಲಿತ್ತು. ಆದರೆ ಅದಕ್ಕೆ ಬೇಕಾದ ಹಣ ಇರಲಿಲ್ಲ. ಅವರಿದ್ದ ಜಾಗದಲ್ಲಿ ಸ್ಲಂ ಮಕ್ಕಳು ಬಹಳಷ್ಟು ಮಂದಿ ಇದ್ದರು.

ಹೇಗಾದರೂ ಮಾಡಿ ಅವರಿಗೆಲ್ಲಾ ಶಿಕ್ಷಣ ಕೊಡಬೇಕು ಎಂದು ಹೇಳಿ ತಾವೇ ಒಂದು ಶಾಲೆಯನ್ನು ತೆರೆದರು. ಅದಕ್ಕೆ ’ಆಶಾ ಓ ಆಶ್ವಾಸನಾ’ ಎಂದು ಹೆಸರಿಟ್ಟರು. ಮೂರನೇ ತರಗತಿಯ ತನಕ ತಾವೇ ಹೇಳಿಕೊಟ್ಟು ಬಳಿಕ ಸರಕಾರಿ ಶಾಲೆಗೆ ಅವರನ್ನು ಸೇರಿಸುತ್ತಿದ್ದರು. ಕೇವಲ ಓದುವುದರಲ್ಲಷ್ಟೇ ಅಲ್ಲದೆ ಪಠ್ಯೇತರ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳನ್ನು ಹುರುದುಂಬಿಸುತ್ತಿದ್ದರು. ಆರಂಭದಲ್ಲಿ ಕಷ್ಟಪಟ್ಟು ದುಡಿದ ಹಣವನ್ನೆಲ್ಲಾ ಇವರೇ ಮಕ್ಕಳ ಶಿಕ್ಷಣಕ್ಕೆ ನೀಡುತ್ತಿದ್ದರು. ಬಳಿಕ ಇವರ ಸೇವೆ ಸಮಾಜಕ್ಕೆ ಗೊತ್ತಾಗಿ ಈಗ ಸಾಕಷ್ಟು ಮಂದಿ ಸಹಾಯ ಮಾಡುತ್ತಿದ್ದಾರೆ. ರಾವ್ ಅವರ ಸೇವಾ ಮನೋಭಾವ ಇದಿಷ್ಟೇ ಅಲ್ಲ. ಕಳೆದ 40 ವರ್ಷಗಳಿಂದ ಇವರು ರಕ್ತದಾನವನ್ನೂ ಮಾಡುತ್ತಾ ಬಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್‍ನಲ್ಲೂ ರಾವ್ ಅವರ ಸೇವೆಯನ್ನು ಸ್ಮರಿಸಿದ್ದರು.

ಮೋದಿ ಅವರು ನಮ್ಮಂತರವ ಬಗ್ಗೆ ಮಾತನಾಡಿದ್ದು ಜೀವನದಲ್ಲೇ ಮರೆಯಲಾಗದಂತಹದ್ದು. ಪ್ರಧಾನಿ ಮೋದಿ ಅವರು ನನ್ನ ಸೇವೆಯನ್ನು ಸಮಾಜಕ್ಕೆ ತಿಳಿಸಿದ್ದು ನನ್ನ ಜೀವನದ ಅತಿದೊಡ್ದ ಸಾಧನೆ. ಕಷ್ಟಪಟ್ಟು ಕೆಲಸ ಮಾಡಿದರೆ ಒಂದಲ್ಲ ಒಂದು ದಿನ ನಿಮ್ಮ ಕಷ್ಟಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂದಿದ್ದಾರೆ ರಾವ್.

No comments