Header Ads

test

ತಂದೆಗೆ ಚಿಕಿತ್ಸೆ ಕೊಡಿಸಲು ಹುಡುಗರಂತೆ ಬದಲಾಗಿ ನಾಲ್ಕು ವರ್ಷ ತಂದೆಯ ಸಲೂನ್ ನಡೆಸಿದ ಅಕ್ಕ-ತಂಗಿ

ಉದರ ನಿಮಿತ್ತಂ ಬಹುಕೃತ ವೇಷಂ ಎಂಬ ಮಾತನ್ನು ಕೇಳಿಯೇ ಇರುತ್ತೀರ. ಆದರೆ ಇವರು ಉದರ ನಿಮಿತ್ತ ಅಲ್ಲ, ತನ್ನ ಅಪ್ಪನ ಚಿಕಿತ್ಸೆಗಾಗಿ ಸುಮಾರು ನಾಲ್ಕು ವರ್ಷಗಳ ಹುಡುಗರಂತೆ ವೇಷ ಬದಲಾಯಿಸಿಕೊಂಡು ತಂದೆಯ ಸಲೂನನ್ನು ಮುನ್ನಡೆಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಥೇಟ್ ಹುಡುಗರಂತೆ ಈ ಅಕ್ಕ ತಂಗಿ ಜಡೆಯನ್ನು ಕತ್ತರಿಸಿಕೊಂಡು, ನೀಟಾಗಿ ಕ್ರಾಪ್ ಬಾಚಿಕೊಂಡು, ಎಲ್ಲೂ ಹುಡುಗಿ ಎಂಬ ಸಂದೇಹ ಬಾರದಂತೆ ಹುಡುಗರಂತೆಯೇ ತಂದೆಯ ಸಲೂನ್‌ನಲ್ಲಿ ಕಟಿಂಗ್, ಷೇವಿಂಗ್ ಮಾಡುತ್ತಿದ್ದರು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಅವರ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಕಾರಣ ಅವರು ಈ ರೀತಿ ಮಾಡಬೇಕಾಯಿತು. ಈ ಕುಟುಂಬದ ಆಧಾರವೇ ಅವರಪ್ಪ ನಡೆಸುತ್ತಿದ್ದ ಸಲೂನ್.



ಈ ಸಲೂನ್ ಬಾಗಿಲು ಮುಚ್ಚಿದರೆ ಕುಟುಂಬ ನಡೆಯುವುದು ಕಷ್ಟ. ಸರಿ ಎಂದು ಸುಮಾರು 18 ವರ್ಷದ ಜ್ಯೋತಿ ಕುಮಾರಿ ಹಾಗೂ 16 ವರ್ಷದ ನೇಹಾ ಇಬ್ಬರೂ ಹುಡುಗರಂತೆ ಬದಲಾದರು. ಆರಂಭದಲ್ಲಿ ಇವರ ಬಳಿ ಕಟಿಂಗ್ ಮಾಡಿಸಲು, ಷೇವಿಂಗ್ ಮಾಡಿಸಲು ಮುಜುಗರ ಪಡುತ್ತಿದ್ದರಂತೆ. ಹಾಗಾಗ ಬಾರದು ಎಂದು ಪುರುಷರಂತೆ ವೇಷ ಬದಲಾಯಿಸಿಕೊಂಡರಂತೆ. ಅಷ್ಟೇ ಅಲ್ಲದೆ ತಮ್ಮ ಹೆಸರುಗಳನ್ನೂ ಬದಲಾಯಿಸಿಕೊಂಡರಂತೆ. ಕೈಗೆ ಬ್ರೇಸ್ ಲೆಟ್, ಶರ್ಟು, ಪ್ಯಾಂಟು, ಕ್ರಾಪ್ ಹಾಕಿಕೊಂಡು ತಮ್ಮ ಹೆಸರುಗಳನ್ನು ದೀಪಕ್ ಮತ್ತು ರಾಜು ಎಂದು ಬದಲಾಯಿಸಿಕೊಂಡು ಕಟಿಂಗ್, ಷೇವಿಂಗ್ ಮಾಡುತ್ತಿದ್ದರು.

ಸುತ್ತಮುತ್ತಲಿನ ಜನಕ್ಕೆ ಇವರು ಯಾರು ಎಂಬುದು ಗೊತ್ತಿತ್ತೇ ಹೊರತು ಹೊಸಬರು ಇವರನ್ನು ಹುಡುಗರು ಎಂದೇ ಭಾವಿಸಿದ್ದರು. ಸಲೂನ್ ತೆರೆದ ಆರಂಭದಲ್ಲಿ ಇಬ್ಬರೂ ಸೇರಿ ಸುಮಾರು 400 ರೂಪಾಯಿ ತನಕ ಸಂಪಾದಿಸುತ್ತಿದ್ದರು. ಬಂದ ಹಣ ಕುಟುಂಬದ ಪೋಷಣೆಗೆ ಹಾಗೂ ತಂದೆಯ ಚಿಕಿತ್ಸೆಗೆ ಸರಿ ಹೊಂದುತ್ತಿತ್ತು ಎಂದು ದಿ ಗಾರ್ಡಿಯನ್ ಪತ್ರಿಕೆಗೆ ಜ್ಯೋತಿ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಜ್ಯೋತಿ, "ಆರಂಭದಲ್ಲಿ ಈ ಕೆಲಸ ಸವಾಲಾಗಿತ್ತು. ಊರಿನ ಜನ ನಮ್ಮನ್ನು ನೋಡಿ ನಗುತ್ತಿದ್ದರು. ಆದರೆ ನಾವು ಅದ್ಯಾವುದನ್ನೂ ತಲೆಗೆ ಹಾಕಿಕೊಳ್ಳಲಿಲ್ಲ. ಕೆಲಸದ ಕಡೆಗೆ ಗಮನ ಹರಿಸಿದೆವು. ನಮಗೆ ಬೇರೆ ದಾರಿ ಇರಲಿಲ್ಲ. ಸಮಯ ಸರಿದಂತೆ ಜನ ಬರ ತೊಡಗಿದರು. ಈಗ ಯಾರಿಗೂ ನಮ್ಮ ಬಗ್ಗೆ ಆ ರೀತಿಯ ಸಂಕೋಚದ ಭಾವನೆ ಇಲ್ಲ" ಎನ್ನುತ್ತಾರೆ.

ಈ ಸಹೋದರಿಯರು ಕೇವಲ ಸಲೂನಷ್ಟೇ ಮುನ್ನಡೆಸುತ್ತಿಲ್ಲ. ಕಾಲೇಜಿಗೂ ಹೋಗುತ್ತಿದ್ದಾರೆ. ಬೆಳಗ್ಗೆ ಕಾಲೇಜು, ಮಧ್ಯಾಹ್ನದ ನಂತರ ಸಲೂನ್ ನೋಡಿಕೊಳ್ಳುತ್ತಾ ಎಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಜ್ಯೋತಿ ಪದವಿ ಶಿಕ್ಷಣ ಪೂರೈಸಿದ್ದಾರೆ. ನೇಹಾ ಮಾತ್ರ ಇನ್ನೂ ಓದುತ್ತಿದ್ದಾಳೆ. ಮಕ್ಕಳು ಈ ರೀತಿ ದುಡಿಯುವುದನ್ನು ನೋಡಿ ಹಾಸಿಗೆ ಹಿಡಿದಿದ್ದ ತಂದೆ ತುಂಬಾ ನೋವನುಭವಿಸಿದ್ದರಂತೆ. ಬಳಿಕ ಆ ಮಕ್ಕಳ ಬಗ್ಗೆ ಅವರಿಗೆ ಹೆಮ್ಮೆ ಅನ್ನಿಸಿತ್ತು.

ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ ಎಂದು ಆ ತಂದೆ ಧ್ರುವ ನಾರಾಯಣ್ ಹೇಳುವಾಗ ಕಣ್ಣು ಹನಿಗೂಡುತ್ತದೆ. ಸುದ್ದಿ ತಿಳಿದ ಸರಕಾರ ಈ ಸಹೋದರಿಯರಿಗೆ ಬಹುಮಾನವನ್ನೂ ನೀಡಿ ಪುರಸ್ಕರಿಸಿದೆ. ಇಂತಹ ಹೆಣ್ಣು ಮಕ್ಕಳು ಇರಬೇಕು ಅಲ್ಲವೇ? ಹೆಣ್ಮಕ್ಳೇ ಸ್ಟ್ರಾಂಗು ಗುರು..!

No comments