Header Ads

test

ಈ ಮಗು ಗಾಢ ನಿದ್ರೆಗೆ ಜಾರಿದರೆ ಏನಾಗುತ್ತದೆ ಗೊತ್ತಾ??

ಈ ಜಗತ್ತಿನಲ್ಲಿ ನಾನಾ ರೀತಿಯ ಚಿತ್ರ ವಿಚಿತ್ರ ಕಾಯಿಲೆಗಳಿಂದ ನರಳುತ್ತಿರುವವರನ್ನು ನೋಡುತ್ತಲೇ ಇರುತ್ತೇವೆ. ಕೇವಲ ಕೆಲವು ಮಂದಿಗೆ ಮಾತ್ರ ಕೆಲವು ಕಾಯಿಲೆಗಳು ಇರುತ್ತವೆ. ಉದಾಹರಣೆಗೆ ಸೂರ್ಯನ ಕಿರಣಗಳು ತಾಗಿದರೆ, ಶಾರ್ಟ್ ಟರ್ಮ್ ಮೆಮೊರಿ ಲಾಸ್, ಇಲ್ಲದ್ದನ್ನು ಇದ್ದಂತೆ ಊಹಿಸಿಕೊಳ್ಳುವುದು... ಈ ರೀತಿ ಕೆಲವು ಕಾಯಿಲೆಗಳನ್ನು ನಾವು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ದಿಲ್ಲಿ ಮೂಲದ ಹಸುಗೂಸು ಒಂದು ವಿಚಿತ್ರ ಕಾಯಿಲೆಯಿಂದ ಬಳಲುತ್ತಿದೆ. ಜಗತ್ತಿನಾದ್ಯಂತ ಕೇವಲ 1300 ಮಂದಿಗೆ ಈ ಕಾಯಿಲೆ ಇದ್ದು, ಆ ಮಗುವಿಗೂ ಇದೆ.



ದಿಲ್ಲಿ ಮೂಲದ ಈ ಬಾಲಕನ ಹೆಸರು ಯದಾರ್ಥ್, ಈ ಬಾಲಕನ ವಯಸ್ಸು 6 ತಿಂಗಳು. "ಸೆಂಟ್ರಲ್ ಹೈಪರ್ ವೆಂಟಿಲೇಷನ್ ಸಿಂಡ್ರೋಮ್" ಎಂಬ ರೋಗದಿಂದ ಈ ಬಾಲಕ ನರಳುತ್ತಿದ್ದಾನೆ. ಇಷ್ಟಕ್ಕೂ ಈ ಸೆಂಟ್ರಲ್ ಹೈಪರ್ ವೆಂಟಿಲೇಷನ್ ಸಿಂಡ್ರೋಮ್ ಎಂದರೆ ಏನು? ಈ ಕಾಯಿಲೆಯಿಂದ ಬಳಲುತ್ತಿರುವವರು ಗಾಢ ನಿದ್ದೆಗೆ ಹೊರಳಿದರೆ ಜೀವಕ್ಕೇ ಅಪಾಯ.

ಆಕ್ಸಿಜನ್..:ಮಕ್ಕಳು ಗಾಢ ನಿದ್ದೆಗೆ ಹೋದರೆ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ಹೆಚ್ಚುತ್ತದೆ. ಇದೇ ವಿಷಯವನ್ನು ಡಾಕ್ಟರ್ ಧೀರೇನ್ ಗುಪ್ತಾ ವಿವರಿಸಿದರು. "ಇದು ವರ್ಣತಂತುಗಳ ಲೋಪದಿಂದ ಹುಟ್ಟಿನಿಂದಲೇ ಬರುವ ರೋಗ. ದೇಹದಲ್ಲಿ ಕಾರ್ಬನ್ ಡೈ ಆಕ್ಸೈಡ್ ಪ್ರಯಾಣ ಹೆಚ್ಚುತ್ತಿದ್ದರೂ ದೇಹದಲ್ಲಿನ ನರಗಳು ಅದನ್ನು ಮಿದುಳಿಗೆ ಕಳುಹಿಸುವಲ್ಲಿ ವಿಫಲವಾಗುತ್ತವೆ. ಹಾಗಾಗಿ ಆತ ಗಾಢ ನಿದ್ದೆಗೆ ಹೊರಳಿದರೆ ತೊಂದರೆ ತಪ್ಪಿದ್ದಲ್ಲ. ಆಕ್ಸಿಜನ್ ಕಡಿಮೆಯಾಗಿ, ಜೀವಾಪಾಯ ಸ್ಥಿತಿ ತಲೆಯೆತ್ತಬಹುದು" ಎಂದು ಮಕ್ಕಳ ವೈದ್ಯ ಡಾಕ್ಟರ್ ಧೀರೇನ್ ಗುಪ್ತಾ ವಿವರಿಸುತ್ತಾರೆ.

ತಾಯಿಯ ನೋವು ಅಷ್ಟಿಷ್ಟಲ್ಲ.:ಆದರೆ ಯದಾರ್ಥ್ ತಾಯಿ ಮಾತ್ರ ಯಾವಾಗಲೂ ಯದಾರ್ಥ್‌ನ್ನು ಕಣ್ಣಿಗೆ ರೆಪ್ಪೆಯಂತೆ ಕಾಪಾಡುತ್ತಾ ಬರುತ್ತಿದ್ದಾಳೆ. ಯದಾರ್ಥ್ ಗಾಢ ನಿದ್ದೆಗೆ ಹೋದ ಪ್ರತಿ ಬಾರಿ ಯದಾರ್ಥ್‍ನ್ನು ಚಿವುಟಿ ನಿದ್ದೆಯಿದ ಎಬ್ಬಿಸುತ್ತಾರೆ. ಯಾವುದೇ ತಾಯಿ ಆದರೂ ಮಕ್ಕಳು ಹಾಯಾಗಿ ಮಲಗಿದರೆ ಸಂತೋಷಪಡುತ್ತಾಳೆ. ಆದರೆ ಯದಾರ್ಥ್ ಹಾಯಾಗಿ ಮಲಗಿದರೆ ಅಪಾಯ. ಯದಾರ್ಥ್ ತಾಯಿ ಮಾತನಾಡುತ್ತಾ, "ನನ್ನ ಮಗುವಿಗೆ ಯಾವುದೋ ಅಪರೂಪದ ಕಾಯಿಲೆ ಇದೆ ಎಂದು ವೈದ್ಯರು ಹೇಳಿದರು. ಯಾವ ನಿಮಿಷ ಏನಾಗುತ್ತದೋ ಎಂದು ಭಯಬೀಳುತ್ತಲೇ ಇರುತ್ತೇನೆ. ಚಿಕಿತ್ಸೆ ಮಾಡಲು ಹಣ ಬೇಕು, ನಿದ್ದೆ ಮಾಡುತ್ತಿದ್ದಾಗ ನಾನೇ ಚಿವುಟಿ ಎಬ್ಬಿಸುತ್ತೇನೆ, ಆ ರೀತಿ ಮಾಡುವಾಗ ನನಗೆ ಸಂಕಟವಾಗುತ್ತದೆ. ಆದರೆ ಗಾಢ ನಿದ್ದೆಗೆ ಹೊರಳಿದರೆ ಯದಾರ್ಥ್ ಜೀವಕ್ಕೇ ಅಪಾಯ" ಎಂದು ಹೇಳುವಾಗ ಅವರ ಕಣ್ಣು ಒದ್ದೆಯಾಗುತ್ತದೆ.

ಸರಕಾರ ಸಹಾಯ ಹಸ್ತ ಚಾಚಿದರೆ..:ಯದಾರ್ಥ್ ತಂದೆ ಮಾತನಾಡುತ್ತಾ, "ಯದಾರ್ಥ್ ಕಾಯಿಲೆಗೆ ಚಿಕಿತ್ಸೆ ಮಾಡಬಹುದು. ಆದರೆ ಅದಕ್ಕೆ ತುಂಬಾ ಹಣ ಅಗತ್ಯ. ನಮ್ಮ ಬಳಿ ಅಷ್ಟು ಹಣ ಇಲ್ಲ. ಸರಕಾರ ಸಹಾಯ ಮಾಡಿದರೆ ವಿದೇಶಕ್ಕೆ ಕರೆದೊಯ್ದು ನಮ್ಮ ಮಗುವನ್ನು ಬದುಕಿಸಿಕೊಳ್ಳುತ್ತೇವೆ, ಯಾರಾದರೂ ಸಹಾಯ ಮಾಡದೆ ಇರುತ್ತಾರಾ ಎಂದು ಎದುರು ನೋಡುತ್ತಿದ್ದೇವೆ" ಎಂದು ಯದಾರ್ಥ್ ತಂದೆ ದುಃಖದಿಂದ ಹೇಳಿದ್ದಾರೆ.

No comments