Header Ads

test

30 ವರ್ಷಗಳಿಂದ ಎರಡು ರೂಪಾಯಿಗೆ ಚಿಕಿತ್ಸೆ ನೀಡುತ್ತಿರುವ ಡಾಕ್ಟರ್ ವೀರ ರಾಘವನ್

ಇಂದು ದುಬಾರಿ ವೈದ್ಯಕೀಯ ಬಡವರಿಗೆ ಕೈಗೆಟುಕದ ದ್ರಾಕ್ಷಿ ಎಂದೇ ಹೇಳಬೇಕು. ಇನ್ನು ಗ್ರಾಮೀಣ ಪ್ರದೇಶದಲ್ಲಾದರೆ ವೈದ್ಯಕೀಯ ಶುಲ್ಕವನ್ನು ಭರಿಸಲಾಗದೆ ನಾಟಿ ವೈದ್ಯ, ಆರ್‌ಎಂಪಿ ವೈದ್ಯರನ್ನೋ ನೋಡಿಕೊಳ್ಳುವಂತಾಗಿದೆ. ಆದರೆ ತಮಿಳುನಾಡಿನ ವ್ಯಾಸರ್‌ಪಾಡಿಯಲ್ಲಿ ಮಾತ್ರ ಆ ರೀತಿ ಇಲ್ಲ. ಅಲ್ಲಿ ವೈದ್ಯಕೀಯ ಚಿಕಿತ್ಸೆ ಬಡವರಿಗೂ ಕೈಗೆಟುಕುವಂತಿದೆ. ಬರಗಾಲದ ಕಾರಣ ಅದೆಷ್ಟೋ ಮಂದಿ ಗ್ರಾಮವನ್ನು ಬಿಟ್ಟು ಹೊರಟು ಹೋದರೂ ತಾನು ಮಾತ್ರ ಆ ಗ್ರಾಮದಲ್ಲೇ ಇರುತ್ತಾ ಅತಿ ಕಡಿಮೆ ಫೀಜಿಗೆ ಗ್ರಾಮಸ್ತರಿಗೆ ವೈದ್ಯ ಸೇವೆಗಳನ್ನು ನೀಡುತ್ತಿರುವ ಡಾಕ್ಟರ್ ವೀರ ರಾಘವನ್ ಬಗ್ಗೆ ನೀವು ಓದಿ ತಿಳಿದುಕೊಳ್ಳಿ.




ತಮಿಳುನಾಡಿನ ಒಂದು ಗ್ರಾಮೀಣ ಪ್ರದೇಶ ವ್ಯಾಸರ್‌ಪಾಡಿ. ಅಲ್ಲೇ ಹುಟ್ಟಿ ಬೆಳೆದವರು ವೀರ ರಾಘವನ್. ಚೆನ್ನೈನಲ್ಲಿನ ಸ್ಟಾನ್‌ಲಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದರು. ತನ್ನ ಬ್ಯಾಚ್‌ನಲ್ಲಿ ಬಹುತೇಕರು ವಿದೇಶಗಳಲ್ಲಿ ಸೆಟ್ಲ್ ಆಗಬೇಕೆಂದುಕೊಂಡರೆ ವೀರ ರಾಘವನ್ ಮಾತ್ರ ತನ್ನೂರಿನಲ್ಲಿ ಸೇವೆ ಮಾಡಬೇಕು ಎಂದು ನಿರ್ಧರಿಸಿದರು. ಆ ರೀತಿ 1973ರಲ್ಲಿ ಒಂದು ಸ್ವಂತ ಕ್ಲಿನಿಕ್ ಪ್ರಾರಂಭಿಸಿದರು. ಆಗ ಅವರು ರೋಗಿಗಳಿಂದ ತೆಗೆದುಕೊಂಡ ಫೀಸು ಎರಡು ರೂಪಾಯಿ. ಆ ಬಳಿಕ ತನ್ನ ಫೀಸನ್ನು ಐದು ರೂಪಾಯಿ ಮಾಡಿದರೂ ಹೆಚ್ಚಿನವರು ಕಷ್ಟ ಎಂದು ಹೇಳಿದ್ದಕ್ಕೆ ಮತ್ತೆ ಎರಡು ರೂಪಾಯಿ ಫೀಸನ್ನೇ ತೆಗೆದುಕೊಳ್ಳಲು ಆರಂಭಿಸಿದರು. ಆ ರೀತಿ ಆ ಭಾಗದಲ್ಲಿ ತನ್ನ ಹೆಸರಿಗಿಂತ ಎರಡು ರೂಪಾಯಿ ಡಾಕ್ಟರ್ ಎಂದು ವೀರ ರಾಘವನ್ ಹೆಚ್ಚಿನವರಿಗೆ ಚಿರಪರಿಚಿತ. ಆದರೆ ಈ ಡಾಕ್ಟರ್ ಈಗಲೂ ಅಷ್ಟೇ ಫೀಸನ್ನು ತೆಗೆದುಕೊಳ್ಳುತ್ತಿರುವುದು ಗಮನಾರ್ಹ.

2015ರಲ್ಲಿ ಚೆನ್ನೈನಲ್ಲಿ ಬಂದ ನೆರೆಯಿಂದ ವ್ಯಾಸರ್‌ಪಾಡಿ ತೀವ್ರ ಬರಗಾಲಕ್ಕೆ ತುತ್ತಾಯಿತು. ಈ ಬರಗಾಲದ ಕಾರಣ ಅದೆಷ್ಟೋ ಮಂದಿ ಗ್ರಾಮವನ್ನು ಬಿಟ್ಟು ಪಕ್ಕದ ಊರುಗಳಿಗೆ ಹೊರಟು ಹೋದರು. ಗ್ರಾಮದಲ್ಲಿ ತೀವ್ರ ಅನಾರೋಗ್ಯ ಪರಿಸ್ಥಿತಿ ಇದ್ದರೂ ಕೆಲವರಾದರೂ ಈ ಊರಿನಲ್ಲಿ ಉಳಿದಿದ್ದಾರೆ ಎಂದರೆ ಅದಕ್ಕೆ ಕಾರಣ ವೀರ ರಾಘವನ್ ಎಂದು ಹೇಳಬಹುದು. ನೆರೆ ಸಂಭವಿಸಿದ ಆ ವರ್ಷದಲ್ಲೇ ಕುಷ್ಠ ರೋಗ ತೀವ್ರವಾಗಿತ್ತು. ಹತ್ತಿರದ ಎರುಕಂಚೆರ್ರಿ ಪ್ರದೇಶದಲ್ಲಿ ಇರುವ ತನ್ನ ಕ್ಲಿನಿಕ್‌ನಲ್ಲಿ ಬೆಳಗ್ಗೆ ಎಂಟು ಗಂಟೆಯಿಂದ ರಾತ್ರಿ ಹತ್ತು ಗಂಟೆವರೆಗೂ ರೋಗಿಗಳನ್ನು ಪರೀಕ್ಷಿಸುವುದರ ಜತೆಗೆ ನಡುರಾತ್ರಿ ಸಮಯದಲ್ಲಿ ಕುಷ್ಠ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ನೀಡುತ್ತಿದ್ದರು ವೀರ ರಾಘವನ್. ತಾನು ಮಾಡಿದ ಸಹಾಯ ಅದೆಷ್ಟೊ ಮಂದಿಯ ಜೀವ ಉಳಿಸಿತು. ಆ ಬಳಿಕ ಅತಿ ಕಡಿಮೆ ಫೀಜಿನ ಕಾರಣದಿಂದಲೇ ತಾವು ಉತ್ತಮ ವೈದ್ಯ ಸೇವೆ ಪಡೆಯುತ್ತಿದ್ದೇವೆ ಎಂದು ಅಲ್ಲಿನವರು ಹೇಳಿದ ಮಾತುಗಳೇ ತನಗೆ ಇನ್ನಷ್ಟು ಬಡವರಿಗೆ ಸಹಾಯ ಮಾಡುವಂತೆ ಮಾಡಿದವು.

ವೀರ ರಾಘವನ್ ಮಾಡುತ್ತಿರುವ ಸೇವೆಗಳ ಬಗೆ ಸುತ್ತಲಿನ ಗ್ರಾಮಗಳಿಗೂ ಗೊತ್ತಾಗಿ ಅಲ್ಲಿಂದ ಸಹ ರೋಗಿಗಳು ಅವರ ಬಳಿಗೆ ಬರಲು ಆರಂಭಿಸಿದರು. ಇದೆಲ್ಲಾ ಉಳಿದ ವೈದ್ಯರಿಗೆ ತಲೆನೋವಾಗಿತ್ತು. ಇಷ್ಟು ಕಡಿಮೆ ಫೀಜಿಗೆ ಚಿಕಿತ್ಸೆ ನೀಡುತ್ತಿರುವ ಬಗ್ಗೆ ಕೆಲವರು ತೀವ್ರವಾಗಿ ವಿರೋಧಿಸಿದರು. ಕನಿಷ್ಠ ನೂರು ರೂಪಾಯಿಯಾದರೂ ಫೀಜು ತೆಗೆದುಕೊಳ್ಳುವಂತೆ ಅವರ ಮೇಲೆ ಒತ್ತಡ ತರಲು ಆರಂಭಿಸಿದರು. ಆದರೆ ವೀರ ರಾಘವನ್ ಬುದ್ಧಿವಂತಿಕೆಯಿಂದ ವ್ಯವಹರಿಸಿದರು.

ಅಲ್ಲಿಯವರೆಗೆ ಎರಡು ರೂಪಾಯಿಗೆ ಚಿಕಿತ್ಸೆ ನೀಡುತ್ತಿದ್ದ ಅವರು ಆ ಬಳಿಕ ಸಂಪೂರ್ಣ ಉಚಿತವಾಗಿ ನೀಡಲು ಆರಂಭಿಸಿದರು. ಅದಕ್ಕೆ ಬದಲಾಗಿ ರೋಗಿಗಳು ನೀಡುವ ಹಣ್ಣು, ಸ್ನಾಕ್ಸ್, ತರಕಾರಿ ಹೀಗೆ ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಅವರು ನೀಡುವ ವಸ್ತುಗಳನ್ನು ತೆಗೆದುಕೊಳ್ಳುತ್ತಿದ್ದರು. ಇವೆಲ್ಲಾ ಬೇರೆ ವೈದ್ಯರಲ್ಲಿ ಬದಲಾವಣೆಗೆ ಕಾರಣವಾದವು.

ಈ ರೀತಿ ಉಚಿತ ವೈದ್ಯಕೀಯ ಚಿಕಿತ್ಸೆ ವೀರ ರಾಘವನ್‌ಗೆ ಹೇಗೆ ಸಾಧ್ಯವಾಯಿತು ಎಂಬ ಸಂದೇಹ ನಿಮಗೂ ಬರಬಹುದು. ಇಂಡಿಯನ್ ಫೆಲೋ ಇನ್ ಇಂಡಸ್ಟ್ರಿಯಲ್ ಹೆಲ್ತ್ (ಎಎಫ್‌ಐಎಚ್)ನಲ್ಲಿ ರಿಕ್ರೂಟಿಂಗ್ ಮಂಡಳಿ ಸದಸ್ಯರಾಗಿದ್ದ ಕಾರಣ ಅದರಿಂದ ಬರುವ ಸಂಪೂರ್ಣ ಆದಾಯವನ್ನು ರೋಗಿಗಳಿಗಾಗಿಯೇ ಬಳಸುತ್ತಿದ್ದಾರೆ. ಅವರ ಪತ್ನಿ ಮಕ್ಕಳು ರಾಘವನ್ ಮಾಡುತ್ತಿರುವ ಕೆಲಸಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಸದ್ಯಕ್ಕೆ ಚೆನ್ನೈನ ಸ್ಲಂ ಒಂದರಲ್ಲಿರುವವರಿಗೆ ಒಂದು ಆಸ್ಪತ್ರೆಯನ್ನು ನಿರ್ಮಿಸಲು ಕೃಷಿ ಮಾಡುತ್ತಿದ್ದಾರೆ. ಅವರ ಸೇವೆ ಅದೆಷ್ಟೋ ಮಂದಿಗೆ ಸ್ಫೂರ್ತಿದಾಯಕ.

No comments