Header Ads

test

ಶಾಕಿಂಗ್..! ಗರ್ಭಿಣಿಗೆ ಎಚ್‍ಐವಿ ರಕ್ತ ಪೂರಣ...ಮೂರು ಮಂದಿ ಜೀವದ ಜತೆ ಚೆಲ್ಲಾಟ ಆಡಿದ ಆಸ್ಪತ್ರೆ ಸಿಬ್ಬಂದಿ!

ಮಧುರೈ: ಸರಕಾರಿ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದ ಕಾರಣ ಗರ್ಭಿಣಿಯೊಬ್ಬರಿಗೆ ಎಚ್‍ಐವಿ ರಕ್ತ ಪೂರೈಸಿರುವ ಘಟನೆ ಇತ್ತೀಚೆಗೆ ತಮಿಳುನಾಡಿನಲ್ಲಿ ನಡೆದಿದ್ದು ತೀವ್ರ ಚರ್ಚೆಗೆ ಕಾರಣವಾಗಿತ್ತು. ರಕ್ತ ಹೀನತೆಯಿಂದ ಬಳಲುತ್ತಿದ್ದ ಗರ್ಭಿಣಿಗೆ ಎಚ್‍ಐವಿ ವೈರಸ್ ಇರುವ ರಕ್ತ ನೀಡಿದ್ದ ಕಾರಣ ಆಕೆಗೂ ಸೋಂಕು ತಗುಲಿತ್ತು. ರಕ್ತದಾನ ಮಾಡಿದ್ದ 19 ವರ್ಷದ ಯುವಕ ತನ್ನಿಂದಾದ ಅಚಾತುರ್ಯಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಾನೆ.


ರಾಮನಾಥಪುರ ಜಿಲ್ಲೆಯ 19 ವರ್ಷದ ಯುವಕ ನವೆಂಬರ್ 30ರಂದು ಶಿವಕಾಶಿ ಬ್ಲಡ್ ಬ್ಯಾಂಕ್‌ಗೆ ರಕ್ತದಾನ ಮಾಡಿದ್ದ. ಆದರೆ ಆತನಿಗೆ ಏಡ್ಸ್ ಇರುವುದು ಗೊತ್ತಿರಲಿಲ್ಲ. ಅಲ್ಲಿನ ಸಿಬ್ಬಂದಿ ಎಚ್‍ಐವಿ ಪರೀಕ್ಷೆ ಮಾಡದೆ ಆತನ ರಕ್ತವನ್ನು ಸತ್ತೂರ್ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 23 ವರ್ಷದ ಗರ್ಭಿಣಿಗೆ ರಕ್ತ ಪೂರೈಸಿದ್ದರು.

ರಕ್ತದಾನ ಮಾಡಿದ್ದ ಆ ಯುವಕ ಇತ್ತೀಚೆಗೆ ಉದ್ಯೋಗ ನಿಮಿತ್ತ ವಿದೇಶಕ್ಕೆ ಹೊರಡಲು ವೈದ್ಯ ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದ. ಆ ಪರೀಕ್ಷೆಯಲ್ಲಿ ಆತನಿಗೆ ಎಚ್‍ಐವಿ ಇರುವುದಾಗಿ ದೃಢಪಟ್ಟಿತ್ತು.

ಇದರಿಂದ ಆತ ಕೂಡಲೆ ಶಿವಕಾಶಿ ಆಸ್ಪತ್ರೆಗೆ ಹೋಗಿ ತನಗೆ ಎಚ್‍ಐವಿ ಇರುವುದನ್ನು ತಿಳಿಸಿದ್ದ. ಆದರೆ ಅದಾಗಲೆ ಆ ರಕ್ತವನ್ನು ಗರ್ಭಿಣಿಗೆ ನೀಡಿರುವುದಾಗಿ ಗೊತ್ತಾಯಿತು. ಆಕೆಗೂ ವೈದ್ಯ ಪರೀಕ್ಷೆಗಳನ್ನು ಮಾಡಲಾಗಿದ್ದು ಎಚ್‍ಐವಿ ಸೋಂಕು ತಲುಲಿದೆ. ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯದ ಕಾರಣದ ಈ ದುರ್ಘಟನೆ ನಡೆದಿದ್ದು. ತನ್ನಿಂದ ಓರ್ವ ಮಹಿಳೆಗೆ ಎಚ್‍ಐವಿ ಸೋಂಕು ತಗುಲಿದ್ದ ಕಾರಣ ಆ ಯುವಕ ಖಿನ್ನನಾಗಿದ್ದ.

ಗುರುವಾರ ಇಲಿ ಪಾಷಾಣ ತಿಂದು ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೆ ಆತನನ್ನು ಕುಟುಂಬಿಕರು ಮಧುರೈ ರಾಜಾಜಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಆ ಯುವಕ ಭಾನುವಾರ ಮೃತಪಟ್ಟಿದ್ದಾನೆ.

ತನಿಖೆಯ ವೇಳೆ ಈ ಯುವಕನಿಗೆ 2016ರಲ್ಲೇ ಎಚ್‌ಐವಿ ಸೋಂಕು ತಗುಲಿತ್ತು ಎಂಬ ಅಂಶ ಬಯಲಾಯಿತು. ಆತ 2016ರಲ್ಲಿ ಸತ್ತೂರಿನಲ್ಲಿ ನಡೆದ ಕ್ಯಾಂಪ್‌ನಲ್ಲಿ ರಕ್ತ ನೀಡಿದ್ದ. ಈ ಬಗ್ಗೆ ಯುವಕನಿಗೆ ತಿಳಿಸಲೆಂದು ಫೋನ್‌ ಮಾಡಿದರೆ ಆತ ಊರಲ್ಲಿರಲಿಲ್ಲ. ಗುರುವಾರ ಊರಿಗೆ ಬಂದಾಗ ಮನೆಯಲ್ಲಿ ಭಾರಿ ಕೋಲಾಹಲ ಉಂಟಾಗಿತ್ತು. ಇದರಿಂದ ದಿಗಿಲುಗೊಂಡ ಯುವಕ ಆತ್ಮಹತ್ಯೆ ಮಾಡಿಕೊಂಡ.

No comments