Header Ads

test

ನಿತ್ಯ ತಮಗೆ ಯಾವ ರೀತಿಯ ಸವಾಲುಗಳು ಎದುರಾಗುತ್ತವೆ ಎಂದು ಹೇಳುತ್ತಿರುವ ಒಬ್ಬ ಮಹಿಳಾ ಪೊಲೀಸ್ಅಧಿಕಾರಿಯ ರಿಯಲ್ ಸ್ಟೋರಿ..!

“ಚಿಕ್ಕಂದಿನಲ್ಲಿ ಅಣ್ಣ ತಮ್ಮಂದಿರು, ಅಕ್ಕ ತಂಗಿಯರು ಸೇರಿ ಕಳ್ಳಪೊಲೀಸ್ ಆಟ ಆಡುತ್ತಿದ್ದೆವು. ಆ ಆಟವನ್ನು ನಾವು ತುಂಬಾ ಎಂಜಾಯ್ ಮಾಡುತ್ತಿದ್ದೆವು. ನಾನು ಯಾವಾಗಲೂ ಪೊಲೀಸ್ ಆಗಿಯೇ ಇರುತ್ತಿದ್ದೆ. ಆಗಿನಿಂದ ನನಗೆ ಪೊಲೀಸ್ ಜಾಬ್ ಎಂದರೆ ತುಂಬಾ ಇಷ್ಟ ಇರುತ್ತಿತ್ತು. ದೊಡ್ಡವಳಾದ ಮೇಲೆ ನಾನು ಪೊಲೀಸ್ ಅಧಿಕಾರಿ ಆಗಬೇಕೆಂದು ಕನಸು ಕಾಣುತ್ತಿದ್ದೆ. ಆದರೆ ನಿಜವಾಗಿ ಪೊಲೀಸ್ ಆಗುವುದೆಂದರೆ ಅಷ್ಟು ಸುಲಭದ ಸಂಗತಿ ಅಲ್ಲ. ಹೆಣ್ಣು, ಗಂಡು ಯಾರಿಗೇ ಆಗಲಿ ಅದು ಕಷ್ಟವಾಗಿಯೇ ಇರುತ್ತದೆ. ಆ ರೀತಿಯ ಅದೆಷ್ಟೋ ಕಷ್ಟಗಳನ್ನು ಮೆಟ್ಟಿನಿಂತು ಇಂದು ಪೊಲೀಸ್ ಅಧಿಕಾರಿ ಆಗಿದ್ದೇನೆ. ನನ್ನ ಕನಸು ನೆರವೇರಿದೆ.


ಪೊಲೀಸ್ ಅಧಿಕಾರಿ ಹುದ್ದೆಗೆ ಆಯ್ಕೆಯಾದ ಮೇಲೆ ನನ್ನ ಸಹೋದ್ಯೋಗಿಗಳು ನನ್ನನ್ನು ಜೂನಿಯರ್ ಆಗಿ ನೋಡುತ್ತಿದ್ದರು. ಆದರೆ ನನ್ನ ಸೀನಿಯರ್‌ಗಳು ನನಗೆ ಒಳ್ಳೆಯ ಸಾಥ್ ನೀಡಿದರು. ಆತ್ಮವಿಶ್ವಾಸ ತುಂಬುತ್ತಿದ್ದರು. ಆ ರೀತಿ ಕರ್ತವ್ಯ ನಿರ್ವಹಿಸುತ್ತಿರಬೇಕಾದರೆ ಒಂದು ದಿನ ಒಂದು ಸಂಭ್ರಮಾಚರಣೆ ನಡೆಯಿತು. ಅದರಲ್ಲಿ ಪಾಲ್ಗೊಂಡಿದ್ದವರು ನಿಯಂತ್ರಣ ಕಳೆದುಕೊಂಡಿದ್ದರು. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ಯಾವುದೇ ರಾಜ್ಯದಲ್ಲಾದರೂ ಹಬ್ಬ, ಉತ್ಸವ, ಸಂಭ್ರಮಾಚರಣೆಗೆ ಭಾರಿ ಜನ ಜಮಾಯಿಸುತ್ತಾರೆ. ಗಲಾಟೆ ಗದ್ದಲ, ಮೈಕ್‌ಗಳು, ಹಾಡು, ಕುಣಿತ ಇದ್ದದ್ದೆ. ಇದರಿಂದ ವೃದ್ಧರಿಗೆ, ಮಕ್ಕಳಿಗೆ, ಪ್ರಾಣಿಗಳಿಗೆ ತೊಂದರೆ ತಪ್ಪಿದ್ದಲ್ಲ. ವಿಪರೀತ ಶಬ್ದಮಾಲಿನ್ಯದಿಂದ ಅವರು ತುಂಬಾ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಒಮ್ಮೆ ಗಣೇಶ ಚತುರ್ಥಿ ಪ್ರಯುಕ್ತ ನಡೆದ ಸಂಭ್ರಮಾಚರಣೆಯಲ್ಲಿನ ಜನ ನಿಯಂತ್ರಣ ಕಳೆದುಕೊಂಡಿದ್ದರು.

ನಾವು ಎಷ್ಟು ಹೇಳಿದರೂ ಅವರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಅದಾಗಲೆ ದೊಡ್ಡ ಸ್ಪೀಕರ್‌ಗಳು, ಡ್ರಮ್ಸ್ ಹಾಕಿ ಭಾರಿ ಶಬ್ದ ಮಾಡುತ್ತಾ ನ್ಯೂಸೆನ್ಸ್ ಮಾಡುತ್ತಿದ್ದರು. ಅದೆಷ್ಟೇ ನಿಯಂತ್ರಿಸೋಣ ಎಂದರೂ ಅವರು ನಮ್ಮ ಮಾತು ಕೇಳುತ್ತಿರಲಿಲ್ಲ. ಅದಾಗಲೆ ರಾತ್ರಿ ತುಂಬಾ ಸಮಯ ಸರಿದಿತ್ತು. ಅಲ್ಲಿರುವವರೆಲ್ಲಾ ಮದ್ಯ ಸೇವಿಸಿದ್ದರು. ಅಲ್ಲೇ ವೃದ್ಧ ದಂಪತಿಗಳು ವಾಸಿಸುತ್ತಿದ್ದರು. ಅವರಿಗೆ ಆರೋಗ್ಯ ಬೇರೆ ಸರಿಯಿರಲಿಲ್ಲ. ಅವರ ಮೊಮ್ಮಗ ನಮ್ಮನ್ನು ನೋಡಿ ಸಹಾಯ ಮಾಡಿ ಎಂದು ಕೇಳಿದ್ದ. ನಾವು ಕಾರ್ಯಕ್ರಮದ ಬಳಿ ಹೋಗಿ ಇದನ್ನೆಲ್ಲಾ ನಿಲ್ಲಿಸುವಂತೆ ಹೇಳಿದೆವು. ಆದರೆ ಅವರು ಮಾತು ಕೇಳಲಿಲ್ಲ. ಕರ್ತವ್ಯದಲ್ಲಿದ್ದ ನಮ್ಮನ್ನು ನಿಂದಿಸಿದರು. ಅಸಭ್ಯ ಪದಜಾಲ ಬಳಸಿದರು. ಆದರೂ ನಾವು ಬಲವಂತದಿಂದ ಸ್ಪೀಕರ್‌ಗಳನ್ನು ನಿಲ್ಲಿಸಿದೆವು. ಹಾಗಾಗಿ ಒಂದು ಸಣ್ಣ ಜಗಳ ನಡೆಯಿತು. ನಾವು ಹೆದರಿಸಿದ ಮೇಲೆ ಅಲ್ಲಿದ್ದವರೆಲ್ಲಾ ಕಾಲುಕಿತ್ತರು. ಈ ರೀತಿಯ ಘಟನೆಗಳು ನಮ್ಮ ಸಮಾಜದಲ್ಲಿ ನಡೆಯುತ್ತಿರುವುದಕ್ಕೆ ತುಂಬಾ ನೋವಾಗುತ್ತದೆ.

ಎಷ್ಟೇ ಸಮಸ್ಯೆಗಳು ಬಂದರೂ, ನಿತ್ಯ ಸವಾಲುಗಳು ಎದುರಾದರೂ ನಾನು ನನ್ನ ಉದ್ಯೋಗವನ್ನು ಮಾತ್ರ ಬಿಡಲಿಲ್ಲ. ಯಾಕೆಂದರೆ ಅದು ನನಗೆ ಬಹಳ ಇಷ್ಟವಾದ ಜಾಬ್ ಆದಕಾರಣ. ನಮ್ಮದು ಹಿರಿಯರು ನಿಶ್ಚಯಿಸಿದ ಮದುವೆ. ನನ್ನ ಗಂಡ ಆದರ್ಶ ಭಾವನೆಗಳುಳ್ಳ ವ್ಯಕ್ತಿ. ಹಾಗಾಗಿ ನಾನು ತುಂಬಾ ಅದೃಷ್ಟವಂತೆ ಎಂದೇ ಹೇಳಬೇಕು. ಅವರೂ ಅಷ್ಟೇ ಪೊಲೀಸ್ ಆಗಬೇಕೆಂದುಕೊಂಡಿದ್ದರಂತೆ. ಆದರೆ ಸಾಧ್ಯವಾಗಲಿಲ್ಲ. ನನ್ನನ್ನು ಪೊಲೀಸ್ ಆಗಿ ನೋಡಿ ನಿತ್ಯ ಸಂತೋಷಪಡುತ್ತಿರುತ್ತಾರೆ. ಅವರು ಕೆಲಸ ಮಾಡುವುದು ನಾಸಿಕ್‌ನಲ್ಲಿ, ನನ್ನ ಡ್ಯೂಟಿ ಕಲ್ಯಾಣ್‌ನಲ್ಲಿ. ಇಬ್ಬರೂ ವಾರದಲ್ಲಿ ಒಂದೆರಡು ಬಾರಿ ಮೀಟ್ ಆಗುತ್ತೇವೆ.

ಮಗು ಆದ ಬಳಿಕ 7 ತಿಂಗಳು ಪ್ರಸೂತಿ ರಜೆ ತೆಗೆದುಕೊಂಡು ಮತ್ತೆ ಡ್ಯೂಟಿಯಲ್ಲಿ ಜಾಯಿನ್ ಆದೆ. ಅಷ್ಟು ಸಣ್ಣ ವಯಸ್ಸಿನ ಮಗನನ್ನು ಬಿಟ್ಟು ಡ್ಯೂಟಿಗೆ ಹೋಗುತ್ತಿರುವುದಕ್ಕೆ ಸ್ವಲ್ಪ ದುಃಖ ಅನ್ನಿಸುತ್ತದೆ. ಆದರೂ ತಪ್ಪಿದ್ದಲ್ಲ. ಮೊದಲು ಕೆಲಸ. ಅದು ಇದ್ದರೆ ನಾನು ನನ್ನ ಮಗುವಿಗೆ ಎಲ್ಲವನ್ನೂ ನೀಡಲು ಸಾಧ್ಯ. ನನ್ನ ಕರ್ತವ್ಯದಲ್ಲಿ ಅದೆಷ್ಟೋ ಉನ್ನತಾಧಿಕಾರಿಗಳಿಂದ ಪ್ರಶಂಸೆ ಪಡೆದೆ. ಅದೆಷ್ಟೋ ರೇಪ್, ವರದಕ್ಷಿಣೆ ಕೇಸ್‌ಗಳನ್ನು ಭೇದಿಸಿದ್ದಕ್ಕೆ ನನಗೆ, ನನ್ನ ತಂಡಕ್ಕೆ ಪ್ರತಾಪ್ ದಿವಾಕರ್ ಕೈಯಾರೆ ಬಹುಮಾನ ಪಡೆದಿದ್ದೇನೆ. ಒಬ್ಬ ಮಹಿಳೆಯಾಗಿ ನಾನು ಪೊಲೀಸ್ ಕರ್ತವ್ಯದಲ್ಲಿ ಮುಂದುರೆಯುತ್ತಿದ್ದರೂ ವರದಕ್ಷಿಣೆ ಕಿರುಕುಳ, ಆಸಿಡ್ ದಾಳಿ, ರೇಪ್ ಪ್ರಕರಣಗಳೊಂದಿಗೆ ಹೋರಾಡುತ್ತಿರುವುದು ನಿಜವಾಗಿಯೂ ನೋವಿನ ಸಂಗತಿ. ಅವರೂ ಸಹ ನಮ್ಮಂತೆ ಮಹಿಳೆಯರೇ ಅಲ್ಲವೇ ಅನ್ನಿಸುತ್ತದೆ. ಕೆಲವೊಮ್ಮೆ 3, 4 ವರ್ಷದ ಮಕ್ಕಳ ಮೇಲೆ ಸಹ ಲೈಂಗಿಕ ದಾಳಿ ನಡೆದ ಕೇಸುಗಳಲ್ಲಿ ಕೆಲಸ ಮಾಡುತ್ತೇವೆ. ಆಗ ಇನ್ನೂ ಮನಸ್ಸು ಆಘಾತಕ್ಕೀಡಾಗುತ್ತದೆ. ಆದರೆ ನನ್ನೊಂದಿಗಿನ ಮಹಿಳೆಯರಿಗೆ ನಾನು ಕೊಡುವ ಸಲಹೆ ಒಂದೇ… ಸಾಧ್ಯವಾದಷ್ಟು ಧೈರ್ಯವಾಗಿರಿ, ಅದೇ ಸ್ಥಿತಿಯಲ್ಲಿ ಮುನ್ನಡೆಯಿರಿ, ಏನೂ ಆಗಲ್ಲ. ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದರೂ ಈ ವಿಚಾರದಲ್ಲಿ ಹಿಂದಡಿ ಯಾಕಿಡಬೇಕು, ಮುಂದೆ ಸಾಗಿರಿ, ಆಗಲೇ ವಿಜಯ ಒಲಿಯುತ್ತದೆ..!”

ಪೊಲೀಸ್ ಜಾಬ್‌ನಲ್ಲಿ ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಒಬ್ಬ ಮಹಿಳಾ ಪೊಲೀಸ್ ಅಧಿಕಾರಿಯ ರಿಯಲ್ ಸ್ಟೋರಿ ಇದು..!

No comments