ಪೋಸ್ಟ್ ಆಫೀಸಲ್ಲಿ ನಮಗೆ ಲಭ್ಯವಿರುವ ಈ 8 ಯೋಜನೆಗಳ ಬಗ್ಗೆ ನಿಮಗೆ ಗೊತ್ತಾ..?

News

ಆರ್ಥಿಕವಾಗಿ ಬೆಳೆಯಲು ಯಾರಿಗೇ ಆಗಲಿ ಉಳಿತಾಯ ಬಹಳ ಮುಖ್ಯ. ಸಂಪಾದಿಸುವ ಹಣವನ್ನು ಉಳಿತಾಯ ಮಾಡಿಕೊಂಡರೆ ಭವಿಷ್ಯದಲ್ಲಿ ಬರುವ ಆಪತ್ಕಾಲ ಸಮಸ್ಯೆಗಳಿಂದ ತೊಂದರೆ ಇರಲ್ಲ. ಆದರೆ ಇಂದು ಅನೇಕ ಬ್ಯಾಂಕ್‌ಗಳ ಜತೆಗೆ ಪೋಸ್ಟಾಫೀಸ್ ಸಹ ನಮಗೆ ಸೇವಿಂಗ್ಸ್ ಸ್ಕೀಮ್‌ ನೀಡುತ್ತಿದೆ. ಪೋಸ್ಟ್ ಆಫೀಸ್‌ನಲ್ಲಿ 8 ವಿಧದ ಸೇವಿಂಗ್ ಸ್ಕೀಮ್‍ಗಳಿವೆ. ಅವುಗಳಲ್ಲಿ ಯಾವುದಾದರೂ ಒಂದರಲ್ಲಿ ಹಣ ಉಳಿತಾಯ ಮಾಡಬಹುದು. ಇದರಿಂದ ಬರುವ ಬಡ್ಡಿ ಸಹ ಚೆನ್ನಾಗಿರುತ್ತದೆ. ಆ ಉಳಿತಾಯ ಯೋಜನೆಗಳು ಏನು ಎಂದು ಈಗ ತಿಳಿದುಕೊಳ್ಳೋಣ.

1. ಪೋಸ್ಟ್ ಆಫೀಸ್ ಸೇವಿಂಗ್ಸ್ ಸ್ಕೀಮ್ : ದೇಶದಲ್ಲಿರುವ ನಾಗರಿಕರು ಈ ಖಾತೆಯಲ್ಲಿ ಉಳಿತಾಯ ಮಾಡಬಹುದು. ಅದಕ್ಕಾಗಿ ತಮ್ಮ ಸಮೀಪದ ಪೋಸ್ಟ್ ಆಫೀಸಿಗೆ ಹೋಗಿ ಅದರಲ್ಲಿ ಖಾತೆ ತೆರೆಯಬೇಕು. ಕನಿಷ್ಠ ರೂ.20ರಿಂದ ಖಾತೆ ಓಪನ್ ಮಾಡಬಹುದು. ಚೆಕ್ ಅಗತ್ಯ ಇಲ್ಲದಿದ್ದರೆ ಮಿನಿಮಂ ಬ್ಯಾಲೆನ್ಸ್ ರೂ.50 ಇಡಬೇಕು. ಅದೇ ಚೆಕ್ ಸದುಪಾಯ ತೆಗೆದುಕೊಂಡರೆ ಮಿನಿಮಂ ಬ್ಯಾಲೆನ್ಸ್ ರೂ.500 ಮೆಯಿಂಟೇನ್ ಮಾಡಬೇಕಾಗಿರುತ್ತದೆ. ಈಗಾಗಲೆ ಈ ಖಾತೆ ಹೊಂದಿರುವವರು ಚೆಕ್ ಸದುಪಾಯ ಪಡೆಯಬಹುದು. ಸಿಬಿಎಸ್ ಸದುಪಾಯ ಇರುವವರಿಗೆ ಸದ್ಯಕ್ಕೆ ಎಟಿಎಂ ಕೊಡಲು ಯೋಚಿಸುತ್ತಿದ್ದಾರೆ. ಈ ರೀತಿ ಉಳಿತಾಯ ಮಾಡುವ ಹಣಕ್ಕೆ ವಾರ್ಷಿಕ ಶೇ.4ರಷ್ಟು ಬಡ್ಡಿ ನೀಡಲಾಗುತ್ತದೆ.

 

2. ರಿಕರಿಂಗ್ ಡಿಪಾಸಿಟ್: ಪೋಸ್ಟ್ ಆಫೀಸಲ್ಲಿ ರಿಕರಿಂಗ್ ಡಿಪಾಸಿಟ್‌ನ್ನು ಕನಿಷ್ಠ ರೂ.10ರಿಂದ ಪ್ರಾರಂಭಿಸಬಹುದು. ರೂ.5 ಮೊತ್ತದೊಂದಿಗೆ ಎಷ್ಟಾದರೂ ಉಳಿತಾಯ ಮಾಡಬಹುದು. ಈ ಖಾತೆ ತೆರೆಯುವಾಗ ನಾಮಿನಿಯನ್ನು ನೇಮಿಸಿಕೊಳ್ಳಬಹುದು. ಈ ಯೋಜನೆ ಮೂಲಕ ಉಳಿತಾಯ ಮಾಡುವ ಹಣಕ್ಕೆ ಶೇ.7.2ರಷ್ಟು ವಾರ್ಷಿಕ ಬಡ್ಡಿ ನೀಡುತ್ತಾರೆ. ಒಂದು ವರ್ಷದವರೆಗೆ ಈ ರೀತಿ ಉಳಿತಾಯ ಮಾಡಿಕೊಂಡ ಹಣದಿಂದ ಶೇ.50ರಷ್ಟು ತೆಗೆದುಕೊಳ್ಳುವ ಅವಕಾಶ ಕಲ್ಪಿಸುತ್ತಿದ್ದಾರೆ. ಈ ಯೋಜನೆ ಕಾಲಾವಧಿ 5 ವರ್ಷಗಳು.

3. ಪೋಸ್ಟ್ ಆಫೀಸ್ ಟೈಮ್ ಡಿಪಾಸಿಟ್: ಈ ಖಾತೆಯನ್ನು ರೂ.200ರಿಂದ ಪ್ರಾರಂಭಿಸಬಹುದು. ಇದರಲ್ಲಿ ಉಳಿತಾಯ ಮಾಡುವ ಹಣವನ್ನು ಕಾಲ ಪರಿಮಿತಿಗೆ ತಕ್ಕಂತೆ ಬಡ್ಡಿ ನೀಡುತ್ತಾರೆ. ವರ್ಷಕ್ಕೆ ಶೇ.6.9, 24 ತಿಂಗಳಿಗೆ ಶೇ.7, ಮೂರು ವರ್ಷಕ್ಕೆ ಶೇ.7.2, 5 ವರ್ಷಕ್ಕೆ ಶೇ.7.7ರವರೆಗೂ ವಾರ್ಷಿಕ ಬಡ್ಡಿ ನೀಡುತ್ತಾರೆ. ಆದರೆ ಬಡ್ಡಿಯನ್ನು ಮಾತ್ರ ಮೂರು ತಿಂಗಳಿಗೊಮ್ಮೆ ಲೆಕ್ಕಹಾಕಲಾಗುತ್ತದೆ. ಕಾಲಪರಿಮಿತಿ ಮುಗಿದ ಮೇಲೆ ಹಣ ಮೆಚ್ಯೂರ್ ಆಗುತ್ತದೆ. ಆ ಬಳಿಕ ಅಗತ್ಯ ಅನ್ನಿಸಿದರೆ ಠೇವಣಿಯನ್ನು ಮುಂದುವರೆಸಬಹುದು. ಇಲ್ಲದಿದ್ದರೆ ವಿತ್ ಡ್ರಾ ಮಾಡಿಕೊಳ್ಳಬಹುದು. ಒಂದು ವೇಳೆ ಮೆಚ್ಯೂರ್ ಆದ ಬಳಿಕ ವಿತ್‌ಡ್ರಾ ಮಾಡದಿದ್ದರೆ ಅದು ಆಟೋಮ್ಯಾಟಿಕ್ ಆಗಿ ರೆನ್ಯೂವಲ್ ಆಗುತ್ತದೆ. ಈ ಉಳಿತಾಯ ಯೋಜನೆಯಲ್ಲಿ ಇಬ್ಬರು ವ್ಯಕ್ತಿಗಳು ಸೇರಿ ಜಾಯಿಂಟ್ ಡಿಪಾಸಿಟ್ ಸಹ ಮಾಡಿಕೊಳ್ಳಬಹುದು.

 

4. ತಿಂಗಳ ಆದಾಯ ಯೋಜನೆ: ತಿಂಗಳು ತಿಂಗಳು ಆದಾಯ ಬೇಕು ಎಂದುಕೊಳ್ಳುವವರಿಗೆ ಈ ಯೋಜನೆ ಉಪಯುಕ್ತ. ಇದಕ್ಕಾಗಿ ಯಾರೇ ಆಗಲಿ ಒಬ್ಬರ ಹೆಸರಲ್ಲಿ ಗರಿಷ್ಠ ಖಾತೆಯಲಿ ಒಮ್ಮೆ ರೂ.4.50 ಲಕ್ಷ ಹಾಕಿಕೊಳ್ಳಬಹುದು. ಅದೇ ಇಬ್ಬರು ವ್ಯಕ್ತಿಗಳಾದರೆ ರೂ.9 ಲಕ್ಷದವರೆಗೂ ಇಡಬಹುದು. ಇವರಿಗೆ ವಾರ್ಷಿಕ ಬಡ್ಡಿ ಶೇ.7.60 ನೀಡುತ್ತಾರೆ. ತಿಂಗಳು ತಿಂಗಳು ಬಡ್ಡಿಯನ್ನು ಪೋಸ್ಟ್ ಆಫೀಸ್ ಖಾತೆ ಮೂಲಕ ಪಡೆಯಬಹುದು. ಆದರೆ ಈ ರೀತಿ ಡಿಪಾಸಿಟ್ ಮಾಡಿದ ಹಣವನ್ನು ವರ್ಷದ ಬಳಿಕವಷ್ಟೇ ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಇದೆ. ಆಗ ಡಿಪಾಸಿಟ್ ಮೊತ್ತದಲ್ಲಿ ಶೇ.2ರಷ್ಟು ಹಿಡಿದುಕೊಂಡು ಕೊಡುತ್ತಾರೆ. ಇನ್ನು 3 ವರ್ಷ ಬಿಟ್ಟು ವಿತ್‌ಡ್ರಾ ಮಾಡಿಕೊಂಡರೆ ಶೇ.1ರಷ್ಟು ಕಡಿತ ಮಾಡಿ ನೀಡುತ್ತಾರೆ.

5. ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್ (ಎನ್‌ಎಸ್‌ಸಿ): ರೂ.100 ಇದ್ದರೆ ಸಾಕು ಇದರಲ್ಲಿ ಉಳಿತಾಯ ಪ್ರಾರಂಭಿಸಬಹುದು. ಇದಕ್ಕೆ ಶೇ.7.9ರಷ್ಟು ವಾರ್ಷಿಕ ಬಡ್ಡಿಯನ್ನು ನೀಡುತ್ತಾರೆ. ಗರಿಷ್ಟವಾಗಿ ಎಷ್ಟಾದರೂ ಇದರಲ್ಲಿ ಉಳಿತಾಯ ಮಾಡಬಹುದು. ಈ ರೀತಿ ಉಳಿತಾಯ ಮಾಡುವ ಹಣಕ್ಕೆ ಆದಾಯ ತೆರಿಗೆ ನಿಯಮ 80ಸಿ ಅಡಿ ತೆರಿಗೆ ವಿನಾಯಿತಿ ಇದೆ. ಸದ್ಯಕ್ಕೆ 5 ವರ್ಷಗಳ ಕಾಲ ಮಿತಿಯಲ್ಲಿ ಈ ಯೋಜನೆ ಲಭ್ಯವಿದೆ. ಗಡುವು ತೀರುವುದಕ್ಕೂ ಮುನ್ನವೇ ಹಣವನ್ನು ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಆದರೆ ಈ ಹಣವನ್ನು ಇನ್ನೊಬ್ಬರ ಹೆಸರಿನ ಮೇಲೆ ಒಮ್ಮೆ ಬದಲಾಯಿಸಿಕೊಳ್ಳಬಹುದು. ಒಂದು ವೇಳೆ ಖಾತೆದಾರ ಮೃತಪಟ್ಟರೆ ಅವರ ನಾಮಿನಿಗಳಿಗೆ ಹಣ ನೀಡುತ್ತಾರೆ. ಆಗ ಆಟೋಮೆಟಿಕ್ ಆಗಿ ಖಾತೆ ಕ್ಲೋಸ್ ಆಗುತ್ತದೆ.

6. ಕಿಸಾನ್ ವಿಕಾಸ್ ಪತ್ರ (ಕೆವಿಪಿ): ರೂ.1000, ರೂ.5 ಸಾವಿರ, ರೂ.10 ಸಾವಿರ ಮೊತ್ತದೊಂದಿಗೆ ಇದರಲ್ಲಿ ಉಳಿತಾಯ ಮಾಡಬಹುದು. ಕನಿಷ್ಠ ರೂ.1 ಸಾವಿರದೊಂದಿಗೆ ಉಳಿತಾಯ ಆರಂಭಿಸಬೇಕಾಗಿರುತ್ತದೆ. ಇದಕ್ಕೆ ಕಾಲ ಮಿತಿ 113 ತಿಂಗಳು. ಅಂದರೆ 9 ವರ್ಷ 5 ತಿಂಗಳು. ಈ ಸಮಯದಲ್ಲಿ ಉಳಿತಾಯ ಮಾಡಿದ ಹಣ ದುಪ್ಪಟ್ಟಾಗುತ್ತದೆ. ಇದಕ್ಕೆ ನಾಮಿನೇಷನ್ ಸಹ ಮಾಡಬಹುದು. ಒಂದು ಪೋಸ್ಟ್ ಆಫೀಸ್‌ನಿಂದ ಇನ್ನೊಂದು ಪೋಸ್ಟ್ ಆಫೀಸಿಗೆ, ಒಬ್ಬರ ಹೆಸರಿನಿಂದ ಇನ್ನೊಬ್ಬರ ಹೆಸರಿಗೆ ಇದನ್ನು ಬದಲಾಯಿಸಿಕೊಳ್ಳಬಹುದು. ಈ ಉಳಿತಾಯ ಮೊತ್ತಕ್ಕೆ ವಾರ್ಷಿಕೆ ಶೇ.7.60 ಬಡ್ಡಿ ನೀಡುತ್ತಾರೆ.

7. ಪಿಪಿಎಫ್ : ವೃದ್ಧಾಪ್ಯದಲ್ಲಿ ಯಾರೇ ಆಗಲಿ ಸಂಪಾದಿಸದ ಕಾರಣ ಆ ಸಮಯದಲ್ಲಿ ತಿಂಗಳು ತಿಂಗಳು ಪೆನ್ಷನ್ ತರಹ ಹಣ ಬರುವಂತೆ ಮಾಡಿಕೊಳ್ಳಲು ಈ ಯೊಜನೆ ಉಪಯೋಗಕ್ಕೆ ಬರುತ್ತದೆ. ಇದರಲ್ಲಿ 15 ವರ್ಷದವರೆಗೂ ತಿಂಗಳು ತಿಂಗಳು ಹಣ ನಿರ್ಧಿಷ್ಟ ಮೊತ್ತದಲ್ಲಿ ಉಳಿತಾಯ ಮಾಡಿಕೊಳ್ಳಬಹುದು. ಇದಕ್ಕಾಗಿ ಶೇ.7.90 ವಾರ್ಷಿಕ ಬಡ್ಡಿ ನೀಡುತ್ತಾರೆ. ಇನ್ನು 15 ವರ್ಷ ಮುಗಿಯುವವರೆಗೂ ಹಣವನ್ನು ಹಿಂತಿರುಗಿ ಪಡೆಯಲು ಸಾಧ್ಯವಿಲ್ಲ. 15 ವರ್ಷ ಮುಗಿದ ಬಳಿಕ ಅಗತ್ಯ ಬಿದ್ದರೆ ಇನ್ನೂ 5 ವರ್ಷ ಮುಂದುವರೆಸಬಹುದು. ಇದಕ್ಕೆ ಸಹ ಆದಾಯ ತೆರಿಗೆ ನಿಯಮ 80 ಸಿ ಅಡಿ ತೆರಿಗೆ ವಿನಾಯಿತಿ ಇದೆ.

8. ಸುಕನ್ಯ ಸಮೃದ್ಧಿ ಖಾತೆ : ಕನಿಷ್ಠ ರೂ.1000ದಿಂದ ಈ ಖಾತೆ ಆರಂಭಿಸಬಹುದು. ಗರಿಷ್ಠವಾಗಿ ವರ್ಷಕ್ಕೆ ಈ ಖಾತೆಯಲ್ಲಿ ರೂ.1.50 ಲಕ್ಷದವರೆಗೂ ಜಮೆ ಮಾಡಬಹುದು. ತಂದೆತಾಯಿ ಅಥವಾ ಪೋಷಕರು ತಮ್ಮ ಮಗಳ ಹೆಸರಿನಲ್ಲಿ ಈ ಖಾತೆ ತೆರೆಯಬಹುದು. ಇದರಲ್ಲಿ ಜಮೆ ಮಾಡಿದ ಹಣಕ್ಕೆ ಶೇ.8.40 ವಾರ್ಷಿಕ ಬಡ್ಡಿ ನೀಡುತ್ತಾರೆ. ಹೆಣ್ಣುಮಗು ಹುಟ್ಟಿದ ದಿನಾಂಕದಿಂದ 10 ವರ್ಷಗಳ ಒಳಗೆ ಈ ಖಾತೆ ತೆರೆಯಬೇಕಾಗಿರುತ್ತದೆ. ವರ್ಷದಲ್ಲಿ ಕನಿಷ್ಠ ರೂ.1000ವಾದರೂ ಡಿಪಾಸಿಟ್ ಮಾಡಬೇಕು. ಆ ರೀತಿ ಮಾಡದಿದ್ದರೆ ಖಾತೆ ಕ್ಲೋಸ್ ಮಾಡುತ್ತಾರೆ. ಆದದ್ರೆ ರೂ.50 ಪೆನಾಲ್ಟಿ ಕಟ್ಟಿ ಮತ್ತೆ ಖಾತೆಯನ್ನು ಮುಂದುವರೆಸಬಹುದು. ಇನ್ನು ಹೆಣ್ಣುಮಗಳಿಗೆ 21 ವರ್ಷ ವಯಸ್ಸಾದಾಗ ಖಾತೆಯನ್ನು ಕ್ಲೋಸ್ ಮಾಡಿ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು. ಆದರೆ ಯುವತಿಗೆ 18 ವರ್ಷ ತುಂಬಿದ ಬಳಿಕ ಸಹ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಲು ಅವಕಾಶ ಇದೆ. ಆದರೆ ಯುವತಿಗೆ ಮದುವೆಯಾದರೆ ಮಾತ್ರ ಆ ಹಣವನ್ನು ವಿತ್‌ಡ್ರಾ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ 21 ವರ್ಷ ವಯಸ್ಸಾಗುವವರೆಗೂ ಕಾಯಬೇಕು.

 

Leave a Reply